ಭಟ್ಕಳ: ಮಗಳು ಮೃತಪಟ್ಟ ಒಂದು ಗಂಟೆಯಲ್ಲಿ ಕೊನೆಯುಸಿರೆಳೆದ ತಂದೆ
Update: 2021-07-12 21:58 IST
ಭಟ್ಕಳ: ಒಂದು ಗಂಟೆಯ ಅವಧಿಯಲ್ಲಿ ತಂದೆ ಮತ್ತು ಮಗಳು ಮೃತಪಟ್ಟ ಘಟನೆ ಮಾರುಕೇರಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ಮಾರುಕೇರಿಯ ಹೆಜ್ಜಲು ನಿವಾಸಿ ರಾಮ ಸುಕ್ರ ಗೊಂಡ (46) ಹಾಗೂ ಅವರ ಪುತ್ರಿ ಕಾವ್ಯ ರಾಮ ಗೊಂಡ (15) ಎಂದು ತಿಳಿದು ಬಂದಿದೆ.
ತಾಲ್ಲೂಕಿನ ಕಿತ್ತೂರು ರಾಣಿ ಚನ್ನಮ್ಮಾ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಕಾವ್ಯಾ, ವಸತಿ ಶಾಲೆಯು ಮುಚ್ಚಿದ್ದರಿಂದ ಮನೆಯಲ್ಲಿಯೇ ಅಭ್ಯಾಸ ಮಾಡಿಕೊಂಡಿದ್ದರು. ಸೋಮವಾರ ಬೆಳಗಿನ ಜಾವ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಮಗಳು ಮೃತಪಟ್ಟ ಒಂದೇ ಗಂಟೆಯ ಅವಧಿಯಲ್ಲಿ ಅನಾರೋಗ್ಯದಿಂದಿದ್ದ ತಂದೆ ರಾಮ ಗೊಂಡ ಅವರು ಕೂಡಾ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಒಂದೇ ಗಂಟೆಯ ಅವಧಿಯಲ್ಲಿ ತಂದೆ-ಮಗಳು ಪ್ರಾಣ ಕಳೆದುಕೊಂಡಿದ್ದು, ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು