×
Ad

ಕೇರಳ ಗಡಿಗಳಲ್ಲಿ ತಪಾಸಣೆ ಮತ್ತಷ್ಟು ಬಿಗಿ: ಮಂಗಳೂರು ಡಿಸಿಪಿ ಹರಿರಾಂ ಶಂಕರ್‌

Update: 2021-07-13 15:56 IST

ಮಂಗಳೂರು, ಜು.13: ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವರ ನಿರ್ದೇಶನದಂತೆ ಕರ್ನಾಟಕ- ಕೇರಳದ ಗಡಿ ಭಾಗಗಳಲ್ಲಿ ಪ್ರಯಾಣಿಸುವವರ ತಪಾಸಣೆಯನ್ನು ಬಿಗಿಗೊಳಿಸಲಾಗುತ್ತಿದೆ ಎಂದು ಮಂಗಳೂರು ಡಿಸಿಪಿ ಹರಿರಾಂ ಶಂಕರ್ ತಿಳಿಸಿದರು.

ಸುದ್ದಿಗಾರರ ಜತೆ ಇಂದು ಮಾಹಿತಿ ಹಂಚಿಕೊಂಡ ಅವರು, ದ.ಕ. ಜಿಲ್ಲೆಯಲ್ಲಿ ಕೋವಿಡ್ 2ನೆ ಅಲೆಯು ಸದ್ಯ ನಿಯಂತ್ರಣದಲ್ಲಿದೆ. ಆದರೆ ಕೇರಳದಲ್ಲಿ ಸೋಂಕು ಹೆಚ್ಚುತ್ತಿದ್ದು, ಝಿಕಾ ಡೆಲ್ಟಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸೋಂಕು ಹರಡುವುದನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೊಳಪಟ್ಟು ತಲಪಾಡಿ, ನೆತ್ತಿಲಪದವು, ನಾರ್ಯಕ್ರಾಸ್, ನಂದರ ಪಡ್ಪು, ಮುದುಂಗಾರು ಕಟ್ಟೆ, ತೌಡುಗೋಳಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದ್ದು, ಸಿಬ್ಬಂದಿ ಬಲವನ್ನೂ ಹೆಚ್ಚಿಸಲಾಗಿದೆ ಎಂದರು.

ಎಸ್‌ಐ ನೇತೃತ್ವದಲ್ಲಿ ಪ್ರತಿ ಚೆಕ್‌ಪೋಸ್ಟ್‌ನಲ್ಲಿ ನಾಲ್ಕರಿಂದ ಐದು ಮಂದಿ ಪೊಲೀಸ್ ಸಿಬ್ಬಂದಿ ಮೂರು ಪಾಳಿಯಲ್ಲಿ ಆರೋಗ್ಯ ಸಿಬ್ಬಂದಿ ಜತೆಯಲ್ಲಿ ತಪಾಸಣೆ ನಡೆಸಲಿದ್ದಾರೆ. ಇದಲ್ಲದೆ ರೈಲ್ವೇ ಪೊಲೀಸರ ಸಹಕಾರದೊಂದಿಗೆ ಅತ್ತಾವರ ಹಾಗೂ ಕಂಕನಾಡಿ ರೈಲ್ವೇ ನಿಲ್ದಾಣಗಳಲ್ಲಿಯೂ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ. ದಿನನಿತ್ಯ ಕೆಲಸ ಕಾರ್ಯಗಳಿಗೆ ಆಗಮಿಸುವವರು, ವಿದ್ಯಾರ್ಥಿಗಳಿಗೆ ಈಗಾಗಲೇ ಕೊರೋನ ನಿರೋಧಕ ಲಸಿಕೆ ಅಥವಾ ಆರ್‌ಟಿಪಿಸಿಎಸ್ ನೆಗೆಟಿವ್ ಪ್ರಮಾಣ ಪತ್ರದ ಆಧಾರದಲ್ಲಿ 14 ದಿನಗಳ ಅವಧಿಗೆ ಪಾಸ್ ನೀಡಲಾಗುತ್ತಿದೆ. ಉಳಿದಂತೆ ಇತರ ಪ್ರಯಾಣಿಕರಿಗೂ 72 ಗಂಟೆಯೊಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಅಥವಾ ಲಸಿಕೆ ಪಡೆದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಅನಗತ್ಯವಾಗಿ ಗಡಿಗಳಲ್ಲಿ ಸಂಚರಿಸುವ ಮೂಲಕ ಕೊರೋನ ಹರಡುವುದನ್ನು ತಡೆಯುವುದು ಮಾತ್ರ ಈ ತಪಾಸಣೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಕೇರಳ- ಕರ್ನಾಟಕ ನಡುವೆ ಬಸ್ ಸಂಚಾರ ಸದ್ಯಕ್ಕೆ ಪುನರಾರಂಭಾಗಿಲ್ಲ. ಆರಂಭವಾದಲೂ ಇದೇ ರೀತಿಯ ಕ್ರಮವನ್ನು ಜಿಲ್ಲಾಡಳಿತದ ಸೂಚನೆಯ ಮೇರೆಗೆ ಅನುಸರಿಸಲಾಗುವುದು ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಡಿಸಿಪಿ ಬಿ.ಪಿ. ದಿನೇಶ್ ಕುಮಾರ್ ಉಪಸ್ಥಿತರಿದ್ದರು.

ಜು. 19 ಮತ್ತು ಜು. 22ರಂದು ನಡೆಯುವ ಎಸೆಸೆಲ್ಸಿ ಪರೀಕ್ಷೆಗೆ ಕೇರಳದಿಂದ ದ.ಕ. ಜಿಲ್ಲೆಗೆ ಬರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಲು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಲಾಗುವುದು.
-ಹರಿರಾಂ ಶಂಕರ್, ಡಿಸಿಪಿ, ಮಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News