ಮನೆ ಕಳವು ಪ್ರಕರಣದ ಆರೋಪಿಯ ಬಂಧನ, 11 ಲಕ್ಷ ಮೌಲ್ಯದ ನಗ-ನಗದು ವಶ

Update: 2021-07-13 12:43 GMT

ಮಂಗಳೂರು, ಜು.13: ನಗರದ ಹೊರವಲಯದ ತೋಕೂರಿನಲ್ಲಿ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಿಸಿಕೊಂಡ ಪಣಂಬೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ, ಸೊತ್ತು ವಶಕ್ಕೆ ಪಡೆದಿದ್ದಾರೆ.

ಕೆಳಗಿನ ತೋಕೂರು ನಿವಾಸಿ ದಾವೂದ್ ಹಕೀಂ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಯಿಂದ 248.600 ಗ್ರಾಂ ತೂಕದ ಚಿನ್ನಾಭರಣ, ನಗದು ಸಹಿತ 11,11,270 ರೂ. ಮೌಲ್ಯದ ಸೊತ್ತನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯು ಸಂತ್ರಸ್ತರ ನೆರೆಹೊರೆಯ. ಸಂತ್ರಸ್ತರ ಮನೆಯಲ್ಲಿ ನಿಕಟ ಸಂಪರ್ಕ ಹೊಂದಿದ್ದು, ಅನ್ಯೋನ್ಯತೆಯಿಂದ ಇದ್ದರು. ಮನೆಯ ಸದಸ್ಯರ ವಿಶ್ವಾಸಗಳಿಸಿ ಮನೆಯ ವಿಚಾರಗಳನ್ನು ತಿಳಿದುಕೊಂಡಿದ್ದರು. ಮನೆಯವರು ಬೇರೆ ಊರಿಗೆ ತೆರಳುವ ವಿಷಯ ತಿಳಿದುಕೊಂಡ ಆರೋಪಿಯು ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಎರಡು ದಿನ ಯಾರೂ ಇಲ್ಲದ ಸಮಯದಲ್ಲಿ ಆರೋಪಿಯು ಮನೆಯ ಹೆಂಚನ್ನು ತೆಗೆದು ಅಕ್ರಮವಾಗಿ ಒಳಪ್ರವೇಶಿಸಿ ನಗದು ಸಹಿತ ಚಿನ್ನಾಭರಣ ಕಳವು ಮಾಡಿದ್ದಾನೆ. ಈ ಬಗ್ಗೆ ಸಂತ್ರಸ್ತರು ಜು.12ರಂದು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದಲ್ಲಿ ಬಂಧಿತನಾದ ಆರೋಪಿಯು ಸಾಲ ಮಾಡಿಕೊಂಡಿದ್ದ. ಹಣಕಾಸಿನ ತೊಂದರೆಯಲ್ಲಿದ್ದ ಈತ ಮನೆ ಕಳವುಗೈದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನಿರ್ದೇಶನದಂತೆ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್‌ಕುಮಾರ್ ಬಾರಿಕೆ, ಎಸಿಪಿ ಎಸ್.ಮಹೇಶ್‌ಕುಮಾರ್ ನೇತೃತ್ವದ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣಾ ಇನ್‌ಸ್ಪೆಕ್ಟರ್ ಅಝಮತ್ ಅಲಿ, ಪಿಎಸ್‌ಐಗಳಾದ ಉಮೇಶ್ ಕುಮಾರ್ ಎಂ.ಎನ್., ಕುಮಾರೇಶನ್, ಪ್ರೊಬೇಷನರಿ ಪಿಎಸ್‌ಐ ಮನೋಹರ್ ಪ್ರಸಾದ್, ಎಎಸ್‌ಐ ಕೃಷ್ಣ, ಸಿಬ್ಬಂದಿಯಾದ ಡೇವಿಡ್ ಡಿಸೋಜ, ಕಮಲಾಕ್ಷ, ಚಂದ್ರಹಾಸ್ ಆಳ್ವ, ದಾದಾಸಾಬ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News