ಭಾರೀ ಮಳೆ: ಉಡುಪಿ ಜಿಲ್ಲೆಯಲ್ಲಿ 20ಕ್ಕೂ ಅಧಿಕ ಪ್ರಕರಣಗಳಲ್ಲಿ 6.50ಲಕ್ಷಕ್ಕೂ ಅಧಿಕ ಹಾನಿ

Update: 2021-07-13 13:01 GMT

ಉಡುಪಿ, ಜು.13: ಕಳೆದ 48ಗಂಟೆಗಳಿಗೂ ಅಧಿಕ ಸಮಯದಿಂದ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ 20ಕ್ಕೂ ಅಧಿಕ ಮನೆಗಳಿಗೆ ಹಾನಿಯಾದ ವರದಿಗಳು ಬಂದಿದ್ದು, ಇದರಿಂದ ಒಟ್ಟು ಸುಮಾರು 6.50 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಸೊತ್ತುಗಳು ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ.

ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ಮಳೆಹಾನಿಯ ಪ್ರಕರಣಗಳು ವರದಿಯಾಗಿದ್ದು, ಗಾಳಿ-ಮಳೆಯಿಂದ ವಾಸ್ತವ್ಯದ ಪಕ್ಕಾಮನೆಗಳಿಗೆ ವಿವಿಧ ಪ್ರಮಾಣದಲ್ಲಿ ಹಾನಿಯಾಗಿವೆ.

ಕಾಪು ತಾಲೂಕು ತೆಂಕ ಗ್ರಾಮದ ಲಲಿತಾ ಎಂಬವರ ಮನೆಗೆ ಸುಮಾರು 80,000ರೂ.ಗಳ ನಷ್ಟದ ಅಂದಾಜು ಮಾಡಿದರೆ, ಕುಂದಾಪುರ ತಾಲೂಕು ಹಂಗಳೂರಿನ ಸುರೇಶ್ ಕೋಟೆಗಾರ್ ಇವರ ಮನೆಗೆ 70ಸಾವಿರದಷ್ಟು ನಷ್ಟವಾಗಿದೆ. ಬೈಂದೂರು ತಾಲೂಕು ಶಿರೂರು ಗ್ರಾಮದ ಮಹಮ್ಮದ್ ರಫೀಕ್ ಮನೆ ಹಾಗೂ ಕಾಪು ತಾಲೂಕು ಮೂಡಬೆಟ್ಟು ಗ್ರಾಮದ ಸಿಂಧು ಸೇರಿಗಾರ್ತಿ ಮನೆಗಳಿಗೆ ತಲಾ 50,000ರೂ.ನಷ್ಟದ ಅಂದಾಜು ಮಾಡಲಾಗಿದೆ.

ಇನ್ನು ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ಲಕ್ಶ್ಮೀ ಮನೆ, ಬ್ರಹ್ಮಾವರ ತಾಲೂಕು 38ಕಳ್ತೂರು ಗ್ರಾಮದ ಪೂರ್ಣಿಮಾ ಹಾಗೂ ವಡ್ಡರ್ಸೆ ಗ್ರಾಮದ ಮೈಮುನ ಎಂಬವರ ಮನೆಗೆ ಮೇಲೆ ಮರ ಬಿದ್ದು ತಲಾ 40,000ರೂ.ನಷ್ಟ ಉಂಟಾಗಿದೆ.

ಉದ್ಯಾವರದ ಸದಾಶಿವ ಎಂಬವರ ಮನೆ ಮೇಲೆ ಮರಬಿದ್ದು 30,000ರೂ., ಕಾರ್ಕಳ ತಾಲೂಕು ಕಸಬಾ ಗ್ರಾಮದ ಪಾಂಡುರಂಗ ಶೆಟ್ಟಿಗಾರ್ ವಾಸದ ಮನೆ, ಬೋಳ ಗ್ರಾಮದ ಯದುನಾಥ ಆಚಾರ್ಯರ ಮನೆ ಹಾಗೂ ಬ್ರಹ್ಮಾವರ ತಾಲೂಕು ಕಾವಡಿ ಗ್ರಾಮದ ಗುರುವ ಇವರ ವಾಸದ ಮನೆ ಮೇಲೆ ಮರ ಬಿದ್ದು ತಲಾ 25,000ದಷ್ಟು ನಷ್ಟ ಉಂಟಾಗಿದೆ.

ಇನ್ನುಳಿದಂತೆ ವಡ್ಡರ್ಸೆ ಗ್ರಾಮದ ಅಬ್ದುಲ್ ಖಾದರ್ ಮನೆ, 34ಕುದಿ ಗ್ರಾಮದ ಕೃಷ್ಣಯ್ಯ ಶೆಟ್ಟಿ ಮನೆ, ಹೊಸಂಗಡಿ ಗ್ರಾಮದ ಶಂಕರ ರತ್ನ ಇವರ ಪಾಸ್ತವ್ಯದ ಪಕ್ಕಾ ಮನೆಗೆ ತಲಾ 20,000ರೂ., ಹೆಬ್ರಿ ತಾಲೂಕು ಶೇಡಿಮನೆ ಗ್ರಾಮದ ರೇವತಿ ಕ್ರಾಸ್ತಾ, ಕಾವ್ರಾಡಿ ಗ್ರಾಮದ ಶಿವರಾಮ ಶೆಟ್ಟಿ ಎಂಬವರ ಮನೆಗಳಿಗೆ ತಲಾ 15,000ರೂ. ನಷ್ಟದ ಅಂದಾಜು ಮಾಡಲಾಗಿದೆ.

ಅಲ್ಲದೇ ಬ್ರಹ್ಮಾವರ ಹಿಲಿಯಾಣ ಗ್ರಾಮದ ಅಂತಯ್ಯ ಶೆಟ್ಟಿ, ಉದ್ಯಾವರ ಗ್ರಾಮದ ಉಪೇಂದ್ರ ಜತ್ತನ್, ಅವಿನಾಶ್, ವಡ್ಡರ್ಸೆ ಗ್ರಾಮದ ಮುನಿಸ್ವಾಮಿ, ಹಂಗಳೂರು ಗ್ರಾಮದ ಆನಂದ ಇವರ ಮನೆಗಳಿಗೂ ಭಾಗಶ: ಹಾನಿಯಾಗಿದ್ದು 8,000ರೂ.ಗಳಿಂದ 12,000ರೂ.ಗಳವರೆಗೆ ನಷ್ಟದ ಅಂದಾಜು ಮಾಡಲಾಗಿದೆ.

18ರವರೆಗೆ ಭಾರೀ ಮಳೆ: ಜು.14ರಿಂದ 18ರ ಬೆಳಗ್ಗೆ 8:30ರವರೆಗೆ ಕರ್ನಾಟಕ ಕರಾವಳಿ ಪ್ರದೇಶದ ಅಲ್ಲಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರ ತಿಳಿಸಿದೆ. ಈ ಅವಧಿಯಲ್ಲಿ ಅಲ್ಲಲ್ಲಿ 115.6ಮಿ.ಮೀನಿಂದ 204.4ಮಿ.ಮೀ.ನಷ್ಟು ಮಳೆ ಬೀಳುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News