ಬೈಂದೂರು: ಎಂಡೋಸಲ್ಪಾನ್ ಸಂತ್ರಸ್ತರಿಗೆ ಕೋವಿಡ್ ಲಸಿಕೆ ಅಭಿಯಾನ
ಬೈಂದೂರು, ಜು.13: ಸೇವಾ ಭಾರತಿ ಕರ್ನಾಟಕ, ಪ್ರೇರಣಾ ಟ್ರಸ್ಟ್ ಶಿವಮೊಗ್ಗ, ಪಿಇಎಸ್ ಶಿವಮೊಗ್ಗ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇವುಗಳ ಆಶ್ರಯದಲ್ಲಿ ಎಂಡೋಸಲ್ಪಾನ್ ಸಂತ್ರಸ್ತ ಕುಟುಂಬದವರಿಗೆ ಉಚಿತ ಕೋವಿಡ್ ಲಸಿಕೆ ನೀಡುವ ಅಭಿಯಾನವು ಶಿರೂರಿನಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ಮುಂದೆ ಮೂರನೇ ಅಲೆ ಬರಬಹುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಎಂಡೋಸಲ್ಫಾನ್ ಪೀಡಿತರು ಹಾಗೂ ಅವರ ಆರೈಕೆದಾರರಿಗೆ ವಾಕ್ಸಿನ್ ನೀಡುವ ಸಲುವಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬೈಂದೂರು ಕ್ಷೇತ್ರದಲ್ಲಿ 966 ಎಂಡೋ ಸಂತ್ರಸ್ತರಿದ್ದು ಸುಮಾರು 3000 ಲಸಿಕೆಯನ್ನು 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಮಾನವಾಗಿ ಹಂಚಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಶಂಕರ್ ಪೂಜಾರಿ, ತಾಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಬೈಂದೂರು ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ, ಸೇವಾಭಾರತಿ ಪ್ರಮುಖರಾದ ಪ್ರಸನ್ನ ಕುಮಾರ್, ರೂಪಲಕ್ಷ್ಮೀ ಉಪಸ್ಥಿತರಿದ್ದರು.