ಉಡುಪಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಬಾಲಕನ ರಕ್ಷಣೆ
ಉಡುಪಿ, ಜು.13; ಅನಾರೋಗ್ಯಕ್ಕೆ ತುತ್ತಾಗಿ, ಉಡುಪಿ ನಗರದ ನಾಯರ್ ಕೆರೆ ಎಂಬಲ್ಲಿ ಅನಾಥ ಸ್ಥಿತಿಯಲ್ಲಿ ದಿನಗಳ ಕಳೆಯುತ್ತಿದ್ದ, ಅಪರಿಚಿತ ಬಾಲಕನನ್ನು ಮಕ್ಕಳ ರಕ್ಷಣಾ ಘಟಕ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಜಂಟಿ ಕಾರ್ಯಾಚರಣೆ ನಡೆಸಿ ಸೂಕ್ತ ಚಿಕಿತ್ಸೆ ಹಾಗೂ ಪುನರ್ವಸತಿ ಕಲ್ಪಿಸಿದೆ.
ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಈ ಬಾಲಕಕನ್ನು ರಕ್ಷಿಸಿ, ಜು.9ರಂದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕಳೆದ ದಾಖಲಿಸಿದ್ದರು. ಬಾಲಕನು ಮಾತನಾಡುವ ಸ್ಥಿತಿಯಲ್ಲಿಲ್ಲದೆ ಇರುವುದರಿಂದ, ಹೆಸರು ವಿಳಾಸ ತಿಳಿದು ಬಂದಿರಲಿಲ್ಲ. ಬಾಲಕನ ವಾರಸುದಾರರು ಈವರೆಗೆ ಪತ್ತೆಯಾಗಿರುವುದಿಲ್ಲ.
ಈ ಬಗ್ಗೆ ನಾಗರಿಕ ಸಮಿತಿಯ ಕಾರ್ಯಕರ್ತರು, ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ ಮಾಹಿತಿ ನೀಡಿದರು. ಅದಕ್ಕೆ ತಕ್ಷಣ ಸ್ಪಂದಿಸಿದ ಅವರು, ಗುಣಮುಖರಾಗಿರುವ ಬಾಲಕನನ್ನು ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆಗೊಳಿಸಿ, ಮಣಿಪಾಲದ ಹೊಸಬೆಳಕು ಆಶ್ರಮದಲ್ಲಿ ನೆಲೆ ಕಲ್ಪಿಸಿದ್ದಾರೆ.
ಬಾಲಕನಿಗೆ ಅಂದಾಜು 17ವರ್ಷ ಪ್ರಾಯವಾಗಿದ್ದು, ಬುದ್ದಿಮಾಂದ್ಯತೆ ಇರುವುದು ಕಂಡುಬಂದಿದೆ. ಪಶ್ಚಿಮ ಬಂಗಾಳದ ನಿವಾಸಿ ಎಂದು ಶಂಕಿಸ ಲಾಗಿದೆ. ಸಂಬಂಧಿಕರು ತುರ್ತಾಗಿ ಮಣಿಪಾಲ ಹೊಸಬೆಳಕು ಆಶ್ರಮದ ಸಂಚಾಲಕರನ್ನು ಸಂಪರ್ಕಿಸಲು ಸೂಚಿಸಲಾಗಿದೆ.