ಎಸೆಸೆಲ್ಸಿ ಪರೀಕ್ಷೆ ಯಶಸ್ವಿಯಾಗಿಲು ಎಲ್ಲಾ ಇಲಾಖೆಗೆಗಳ ಸಹಭಾಗಿತ್ವ ಅಗತ್ಯ: ಶಾಸಕ ಮಠಂದೂರು

Update: 2021-07-13 13:49 GMT

ಪುತ್ತೂರು: ಕೊರೋನ ಭೀತಿಯ ಮಧ್ಯೆ ಕಳೆದ ವರ್ಷದಂತೆ ಈ ವರ್ಷವೂ ಎಸೆಸೆಲ್ಸಿ ಪರೀಕ್ಷೆ ನಡೆಸಲಾಗುತ್ತಿದ್ದು ಮಕ್ಕಳ ಆರೋಗ್ಯದ ಸುರಕ್ಷತೆ ಹಾಗೂ ಪರೀಕ್ಷಾ ಸುರಕ್ಷತೆಯ ದೃಷ್ಠಿಯಿಂದ ಎಲ್ಲಾ ಇಲಾಖೆಗಳನ್ನು ಸಹಭಾಗಿತ್ವ ಅಗತ್ಯ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು. 

ಅವರು ಮಂಗಳವಾರ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರೌಢಶಾಲಾ ಮುಖ್ಯಸ್ಥರ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. 

ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ನಿಟ್ಟಿನಲ್ಲಿ ಎಸೆಸೆಲ್ಸಿ ಅಂಕಪಟ್ಟಿಯು ಬಹಳ ಪ್ರಾಮುಖ್ಯವಾಗಿದ್ದು, ಕೊರೋನ ಮುನ್ನೆಚ್ಚರಿಕೆ ನಡುವೆ ಅನಿವಾರ್ಯವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ ವರ್ಷವೂ ಕೊರೋನ ಭೀತಿಯ ಮಧ್ಯೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಈ ವರ್ಷ ಸಂದರ್ಭಕ್ಕನುಗುಣವಾಗಿ ಪ್ರಶ್ನಾ ಪತ್ರಿಕೆಯಲ್ಲಿ ಬದಲಾವಣೆ ಮಾಡಿಕೊಂಡು ಪರೀಕ್ಷೆ ನಡೆಸಲಾಗುತ್ತಿದ್ದು ಅದಕ್ಕೆ ಪೂರಕವಾಗಿ ಮಕ್ಕಳನ್ನು ತಯಾರಿ ಮಾಡಬೇಕಾಗಿದೆ. ಪರೀಕ್ಷೆಗೆ ಹಾಜರಾಗುವ ಮಕ್ಕಳ ಆರೋಗ್ಯದ ಸುರಕ್ಷತೆಯ ಕೇಂದ್ರಗಳಿಗೆ ಆವಶ್ಯಕವಾಗಿರುವ ಮೂಲಭೂತ ಸೌಲಭ್ಯಗಳನ್ನು ಇಲಾಖೆ, ಜನಪ್ರತಿನಿಧಿ ಹಾಗೂ ಸಂಘ ಸಂಸ್ಥೆಗಳನ್ನು ಬಳಸಿಕೊಳ್ಳುವ ಮುಖಾಂತರ ನಿರ್ಭೀತಿಯಿಂದ ಶೇ.100ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು. 

ಪರೀಕ್ಷಾ ಕೇಂದ್ರಗಳಿಗೆ ತೆರಳುವ ಸಂದರ್ಭ ಹಾಗೂ ಮನೆ ಹಿಂತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗದಂತೆ  ನಗರದ ಪ್ರಮುಖ ಸ್ಥಳಗಳಲ್ಲಿ ಹೆಚ್ಚವರಿ ಪೊಲೀಸರ ನಿಯೋಜನೆ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು. ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎರಡು ದಿನ ಎಲ್ಲಾ ರೂಟ್‍ಗಳಲ್ಲಿ ಬಸ್ ಕಾರ್ಯನಿರ್ವಹಿಸುವುದು ಹಾಗೂ ಕುಂಟಾರು, ಮೇನಾಲ, ಪಾಣಾಜೆ ಮೊದಲಾದ ಗಡಿ ಭಾಗಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೂ ಬಸ್ ಸೌಲಭ್ಯವನ್ನು ಕಲ್ಪಿಸುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ನದಿ, ತೋಡು ದಾಟಿ ಬರುವಂತ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಮಾತನಾಡಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಬಹುತೇಕ ಸಿದ್ದತೆಗಳು ಈಗಾಗಲೇ ಪೂರ್ಣಗೊಂಡಿದೆ. ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಗೊಂದಲ, ವ್ಯತ್ಯಾಸಗಳು ಉಂಟಾಗದಂತೆ ಕೇಂದ್ರದ ಮುಖ್ಯಸ್ಥರು ಮುಂಜಾಗ್ರತೆ ವಹಿಸಬೇಕು ಎಂದರು.

ಪ್ರಶ್ನೆ ಪತ್ರಿಕೆ ಸಾಗಾಟ ಸಂದರ್ಭದಲ್ಲಿ ಪೊಲೀಸ್ ಭದ್ರತೆ, ಪ್ರತಿ ಕೇಂದ್ರಗಳಿಗೆ ಪುರುಷ ಪೊಲೀಸ್ ಸಿಬಂದಿಗಳನ್ನು ನಿಯೋಜಿಸುವುದು. ಪರೀಕ್ಷಾ ಕೇಂದ್ರದ ಆಸುಪಾಸಿನಲ್ಲಿ ಜೆರಾಕ್ಸ್ ಅಂಗಡಿಗಳು ತೆರೆಯದಂತೆ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದರು. ಪ್ರಶ್ನಾ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸಾಗಿಸಲು 10 ವಾಹನಗಳನ್ನು ಒದಗಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳು ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಹಾಲ್ ಟಿಕೆಟ್ ತೋರಿಸಿದಾಗ ಉಚಿತ ಪ್ರಯಾಣಿಸಬಹುದು. ಹಾಗೂ ಗಡಿ ಪ್ರದೇಶಗಳಲ್ಲಿರುವ ಚೆಕ್‍ಪೋಸ್ಟ್‍ಗಳಲ್ಲಿಯೂ ಹಾಲ್ ಟಿಕೆಟ್ ತೋರಿಸಿ ತೆರಳಬಹುದು ಎಂದು ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ, ಪುತ್ತೂರು ಹಾಗೂ ಕಡಬ ತಾಲೂಕಿನ ಒಟ್ಟು 25 ಪರೀಕ್ಷಾ ಕೇಂದ್ರಗಳಿಗೂ ಕಿರಿಯ ಆರೋಗ್ಯ ಸಹಾಯಕಿ, ಆಶಾಕಾರ್ಯಕರ್ತೆಯರನ್ನು ನಿಯೋಜಿಸಲಾಗುತ್ತಿದ್ದು ಅಲ್ಲಿ ಪ್ರತಿ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್, ಫಲ್ಸ್‍ಆಕ್ಸಿಮೀಟರ್ ನಡೆಸಲಾಗುವುದು. ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಾಸಗಳಿದ್ದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಪಾಸಿಟಿವ್ ಕಂಡು ಬಂದರೆ ಬಲ್ನಾಡ್ ಕೋವಿಡ್ ಕೇರ್ ಸೆಂಟರ್ ಪರೀಕ್ಷೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಪೌರಾಯುಕ್ತ ಮಧು ಎಸ್.ಮನೋಹರ್ ವೇದಿಕೆಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಸ್ವಾಗತಿಸಿ, ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News