×
Ad

ಮೀನುಗಾರರ ದೋಣಿ ತೆರವಿಗೆ ಹುನ್ನಾರ: ಮೀನುಗಾರರ ಸಂಘ ಆರೋಪ

Update: 2021-07-13 23:03 IST

ಮಂಗಳೂರು, ಜು.13: ಸಾಗರ ಮಾಲಾ ಯೋಜನೆಯ ಕೋಸ್ಟಲ್ ಬರ್ತ್ ನಿರ್ಮಾಣ ಕಾಮಗಾರಿಯು ಬೆಂಗರೆ ನದಿ ದಂಡೆಯಲ್ಲಿ ಗ್ರಾಮಸ್ಥರ ವಿರೋಧದ ನಡುವೆಯೂ ಮುಂದುವರಿದಿದೆ. ಈಗ ಮೀನುಗಾರರ ದೋಣಿಗಳನ್ನು ಬಲವಂತವಾಗಿ ತೆರವುಗೊಳಿಸುವ ಹುನ್ನಾರದಲ್ಲಿ ಜಿಲ್ಲಾಡಳಿತ ತೊಡಗಿಕೊಂಡಿದೆ ಎಂದು ಪಲ್ಗುಣಿ ನಾಡದೋಣಿ ಮೀನುಗಾರರ ಸಂಘ ಆರೋಪಿಸಿದೆ.

ಸಾಂಪ್ರದಾಯಿಕ ಮೀನುಗಾರರು ತಲೆಮಾರುಗಳಿಂದ ಇದೇ ತಂಗುದಾಣಗಳಲ್ಲಿ ದೋಣಿ ನಿಲ್ಲಿಸುತ್ತಾ ಬಂದಿದ್ದಾರೆ. ಪರ್ಯಾಯ ವ್ಯವಸ್ಥೆ, ಮಾತುಕತೆಗಳಿಲ್ಲದೆ ಜಿಲ್ಲಾಡಳಿತ ಈ ಜಾಗವನ್ನು ಆಕ್ರಮಿಸಲು ಮುಂದಾಗಿದೆ. ಅಲ್ಲಿ ತಂಗಿರುವ ಮೀನುಗಾರರ ನಾಡದೋಣಿಗಳನ್ನು ಒತ್ತಡ ಹೇರಿ ಬಲವಂತವಾಗಿ ತೆರವುಗೊಳಿಸಲು ಯತ್ನಿಸಲಾಗುತ್ತಿದೆ. ಇಂತಹ ಸರ್ವಾಧಿಕಾರಿ ಧೋರಣೆಯನ್ನು ಕೈ ಬಿಟ್ಟು ಕಾಮಗಾರಿಯಿಂದ ಮೀನುಗಾರರಿಗೆ ಆಗುವ ಸಮಸ್ಯೆಗಳನ್ನು ನ್ಯಾಯಯುತ ವಿಧಾನದಲ್ಲಿ ಪರಿಹರಿಸುವಂತೆ ಸಂಘ ಆಗ್ರಹಿಸಿದೆ.

ದಟ್ಟ ಜನ ವಸತಿಯುಳ್ಳ ಕಸಬಾ ಬೆಂಗರೆ ಪ್ರದೇಶ ಕೋಸ್ಟಲ್ ಬರ್ತ್‌ಗೆ ಯೋಗ್ಯ ಸ್ಥಳ ಅಲ್ಲದಿದ್ದರೂ ಏಕಪಕ್ಷೀಯವಾಗಿ ಯೋಜನೆಗೆ ಅನುಮೋದನೆ ಪಡೆಯಲಾಯಿತು. ಯೋಜನೆಯಿಂದ ಮನೆ, ಶೆಡ್‌ಗಳನ್ನು ಕಳೆದುಕೊಳ್ಳುವ ಸಂತ್ರಸ್ತ ಮೀನುಗಾರ ಕುಟುಂಬಗಳ ಜೊತೆಗೆ ಈವರಗೆ ಯಾವ ಮಾತುಕತೆಯನ್ನೂ ನಡೆಸಿಲ್ಲ. ಸಾಂಪ್ರದಾಯಿಕ ಮೀನುಗಾರರ ದೋಣಿಗಳು ತಲೆ ತಲಾಂತರದಿಂದ ತಂಗುವ ನದಿ ದಂಡೆಗಳು ಯೋಜನೆಯ ಪ್ರದೇಶದ ಒಳಗಡೆ ಬರುತ್ತದೆ. ಆದರೆ, ಈವರೆಗೂ ಮೀನುಗಾರರ ಜೊತೆಗೆ ಯಾವ ಮಾತುಕತೆ ನಡೆಸಿಲ್ಲ. ಈಗ ದೋಣಿಗಳು ತಂಗಲು ಸಮರ್ಪಕ ವ್ಯವಸ್ಥೆ ಮಾಡದೆ ಏಕಾಏಕಿ ಅಲ್ಲಿಂದ ದೋಣಿಗಳನ್ನು ತೆರವುಗೊಳಿಸುವಂತೆ ಬಲವಂತ ಪಡಿಸಲಾಗುತ್ತಿದೆ. ಪೊಲೀಸ್ ಮಧ್ಯಪ್ರವೇಶದ ಬೆದರಿಕೆ ಹಾಕಲಾಗುತ್ತಿದೆ. ಇದರಿಂದ ಸಾಂಪ್ರದಾಯಿಕ ಮೀನುಗಾರಿಕೆಯಿಂದ ಬದುಕು ಕಟ್ಟಿಕೊಂಡಿರುವ ನೂರಾರು ಮೀನುಗಾರ ಕುಟುಂಬಗಳು ತಮ್ಮ ದುಡಿಮೆಯನ್ನು ಕಳೆದು ಕೊಳ್ಳುವ ಭೀತಿ ಎದುರಾಗಿದೆ.

ಬಂದರು, ಮೀನುಗಾರಿಕೆ ಇಲಾಖೆ, ಜಿಲ್ಲಾಡಳಿತ ಬೆಂಗರೆ ನಿವಾಸಿಗಳು ಹಾಗೂ ಸ್ಥಳೀಯ ಮೀನುಗಾರರ ಮೇಲೆ ನಡೆಸುವ ಅತಿರೇಕದ ಕ್ರಮಗಳನ್ನು ಕೈ ಬಿಡಬೇಕು. ಮೀನುಗಾರರ ದೋಣಿ ತಂಗುದಾಣಗಳನ್ನು ಉಳಿಸುವ, ಮನೆ, ಶೆಡ್‌ಗಳನ್ನು ಕಳೆದುಕೊಳ್ಳವ ಸಂತ್ರಸ್ತರಿಗೆ ನ್ಯಾಯಯುತ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮುಂದುವರಿಯಬೇಕು. ಆ ನಿಟ್ಟಿನಲ್ಲಿ ಮೀನುಗಾರರು, ಸಂತ್ರಸ್ತರೊಂದಿಗೆ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮೀನುಗಾರರ ಸಭೆ ನಡೆಸಬೇಕು. ಇದರ ಹೊರತಾಗಿ ಬಲವಂತದ ಕ್ರಮಗಳಿಗೆ ಮುಂದಾದರೆ ತೀವ್ರ ಪ್ರತಿಭಟನೆಗಳನ್ನು ನಡೆಸಲಾಗುತ್ತದೆ ಎಂದು ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಧ್ಯಕ್ಷ ಅಬ್ದುಲ್ ತಯ್ಯೂಬ್ ಬೆಂಗರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News