ಕೋವಿಡ್ 3ನೇ ಅಲೆಯ ಭಯ ಬೇಡ, ಎಚ್ಚರಿಕೆ ಅಗತ್ಯ: ಸಚಿವ ಡಾ. ಸುಧಾಕರ್

Update: 2021-07-14 12:16 GMT

ಕಾರ್ಕಳ : ಮಕ್ಕಳಿಗೆ ಕೋವಿಡ್ ಮೂರನೇ ಅಲೆಯ ಸೋಂಕು ತಗಲುತ್ತದೆ ಎಂದು ಪೋಷಕರು ಭಯಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಅಗತ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಪೋಷಕರಿಗೆ ಸಲಹೆ ನೀಡಿದರು.

ಕೋವಿಡ್ 3 ನೇ ಅಲೆಯ ಮುನ್ನೆಚ್ಚರಿಕೆಯಾಗಿ 15 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಕಳ ಕ್ಷೇತ್ರದಾದ್ಯಂತ ಆಯೋಜಿಸಿರುವ 'ವಾತ್ಸಲ್ಯ' ಮಕ್ಕಳ ಆರೋಗ್ಯ ತಪಾಸಣಾ ಶಿಬಿರವನ್ನು ಬೆಳ್ಮಣ್ ಕೃಷ್ಣ ಸಭಾಭವನದಲ್ಲಿ  ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಅನಾರೋಗ್ಯದ ಸಮಸ್ಯೆ  ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ಹಾಗಾಗಿ ಯಾವ ಮಕ್ಕಳಿಗೆ ಇತರೆ ಆರೋಗ್ಯದ ಸಮಸ್ಯೆಗಳು ಇರುತ್ತದೋ ಅದನ್ನು ಆರಂಭದಲ್ಲಿಯೇ ಪರೀಕ್ಷೆ ಮಾಡಿ ಕಂಡು ಹಿಡಿಯಬೇಕು. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯದ ಶಿಬಿರಗಳನ್ನು ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳುವ ಮೂಲಕ ಬೇಕಾದ ಪೌಷ್ಟಿಕ ಆಹಾರ ಮತ್ತು ಔಷಧೋಪಚಾರ ಮಾಡುವುದು ಸರಕಾರದ ಕರ್ತವ್ಯವಾಗಿದೆ ಎಂದರು.

ನಮ್ಮ ಮುಂಜಾಗ್ರತೆ ಕ್ರಮಗಳು ಬಹಳ ಮುಖ್ಯವಾಗಿದೆ.  ಮಾಸ್ಕ್ ಗಳನ್ನು ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಅನಗತ್ಯವಾಗಿ ಗುಂಪು ಸೇರುವುದನ್ನು ನಾವು ನಿಯಂತ್ರಣ ಮಾಡಿದರೆ. ಬಹುಶಃ 3ನೇ ಅಲೆ ಅಥವಾ ಇತರ ಅಲೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ನೆರೆಯ ಕೇರಳದಲ್ಲಿ 2ನೇ ಅಲೆ ಸಂಪೂರ್ಣ ಕಡಿಮೆ ಆಗಿಲ್ಲ. ಹಾಗಾಗಿ ದ.ಕ ಮತ್ತು ಉಡುಪಿ ಜಿಲ್ಲೆಗಳು ಎಚ್ಚರ ವಹಿಸಬೇಕು. ಕೊರೋನ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ 2 ಡೋಸ್ ಲಸಿಕೆ ಪಡೆದು ಎಲ್ಲರೂ ಅತ್ಯಂತ ಎಚ್ಚರಿಕೆಯಿಂದ ಇದ್ದು ನಮ್ಮನ್ನು ನಾವು ರಕ್ಷಣೆ ಮಾಡುವ ಕಾರ್ಯ ಮಾಡಬೇಕಾಗಿದೆ ಎಂದರು. ಲಸಿಕೆ ಕಾರ್ಯ ಕ್ರಮವನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ.  ಮುಂದಿನ ವಾರದಿಂದ ಜಿಲ್ಲೆಗೆ ಹೆಚ್ಚಿನ ಲಸಿಕೆ ಲಭ್ಯವಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಶಾಸಕ ಸುನೀಲ್ ಕುಮಾರ್ ಅವರ ಬೇಡಿಕೆಯಂತೆ ಕಾರ್ಕಳಕ್ಕೆ ಸರಕಾರಿ ನರ್ಸಿಂಗ್ ಕಾಲೇಜ್‌ನ್ನು ನೀಡುವ ಬಗ್ಗೆ ಭರವಸೆ ನೀಡಿದ ಸಚಿವರು, ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಕೈಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಶಾಸಕ ಸುನೀಲ್ ಕುಮಾರ್ ಅವರನ್ನು ಹೊಗಳಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉತ್ತಮ ಸೇವೆಯ ಹೆಗ್ಗಳಿಕೆ ಹೊಂದಿರುವ ಬೆಳ್ಮಣ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಿ.ಬಿ. ರಾವ್‌ ರವರನ್ನು ಸಚಿವರು ಗೌರವಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಅಕ್ಷರದಾಸೋಹ ಕಿಟ್ ವಿತರಿಸಲಾಯಿತು. ಇದೇ ವೇಳೆ ಸಚಿವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶಾಸಕ ವಿ.ಸುನೀಲ್ ಕುಮಾರ್ ಅವರು ವಹಿಸಿದ್ದರು.  ಅತಿಥಿಯಾಗಿ ಬಿ. ಮಣಿರಾಜ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸಿಇಓ ಡಾ.ವೈ ನವೀನ ಭಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಡಾ. ಪಾಟೀಲ್ ಓಂ ಪ್ರಕಾಶ್, ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ. ಉದಯ್ ಕುಮಾರ್ ಎಂ.ಆರ್, ಡಿಎಚ್ಓ ಡಾ. ನಾಗಭೂಷಣ ಉಡುಪ, ವಾತ್ಸಲ್ಯ ಸಂಯೋಜಕ ಸುಮಿತ್ ಶೆಟ್ಟಿ, ಸಹ ಸಂಯೋಜಕ ಹರೀಶ್ ನಾಯಕ್, ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮಾ ಉದಯ್ ಶೆಟ್ಟಿ, ಟಿಎಚ್ಓ ಡಾ. ಕೃಷ್ಣಾನಂದ, ತಹಶಿಲ್ದಾರ್ ಪ್ರಕಾಶ್, ತಾ.ಪಂ. ಇಓ ಗುರುದತ್ತ್, ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ ತಂತ್ರಿ, ಐಎಂಎ ರಾಜ್ಯಾಧ್ಯಕ್ಷ ಡಾ.ಕೆ ಸುರೇಶ್ ಕುಡ್ವ, ತಾಲೂಕು ಪಂಚಾಯತ್ ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಮಂಗಳೂರಿನ ಎಜೆ ಆಸ್ಪತ್ರೆಯ ಪಿಎಇಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥೆ ಹಾಗೂ ಮಕ್ಕಳ ತಜ್ಞೆ ಡಾ. ಅಕ್ಷತಾ.  ಎಸ್. ಕೆ. ಸಾಲ್ಯಾನ್ ಬೆಳ್ಮಣ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News