ಕೊರೋನ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರಾಜ್ಯದೊಳಗೆ ಪ್ರವೇಶ: ಸಚಿವ ಡಾ. ಸುಧಾಕರ್
ಉಡುಪಿ, ಜು.14: ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಂದ ಕೊರೋನ ನೆಗೆಟಿವ್ ವರದಿ ಇರುವವರನ್ನು ಮಾತ್ರ ರಾಜ್ಯದೊಳಗೆ ಬಿಡುವಂತೆ ಗಡಿ ಪ್ರದೇಶದಲ್ಲಿರುವ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಸರಕಾರ ಈಗಾಗಲೇ ಸೂಚನೆ ನೀಡಿದೆ. ಅದೇ ರೀತಿ ಅಲ್ಲಿಂದ ಬರುವವರು ಕಡ್ಡಾಯವಾಗಿ ಲಸಿಕೆ ಹಾಕಿ ಕೊಂಡಿರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಹಿಂಬದಿಯಲ್ಲಿ ನೂತನವಾಗಿ ಜಿಲ್ಲಾಸ್ಪತ್ರೆಯ ನಿರ್ಮಿಸಲು ಉದ್ದೇಶಿಸಿರುವ ಜಾಗವನ್ನು ಬುಧವಾರ ಪರಿಶೀಲಿಸಿದ ಬಳಿಕ ಅವರು ಮಾಧ್ಯವುದವರೊಂದಿಗೆ ಮಾತನಾಡುತಿದ್ದರು.
ಮೂರನೆ ಅಲೆ ಆತಂಕ ಎದುರಾಗದಂತೆ ನಾವೆಲ್ಲರು ಕೂಡ ಬಿಗಿಯಾದ ಕ್ರಮಗಳನ್ನು ಅನುಸರಿಸಬೇಕು. ಕೊವಿಡ್ ವಿರುದ್ಧ ಸರಿಯಾಗಿ ಹೆಜ್ಜೆ ಇಟ್ಟರೆ ಯಾವ ಅಲೆ ಕೂಡ ನಮ್ಮನ್ನು ಬಾಧಿಸುವುದಿಲ್ಲ. ಈಗಾಗಲೇ 2.60ಕೋಟಿ ಲಸಿಕೆ ಹಾಕಿದ್ಜದೇವೆ. ಇನ್ನು ಬಾಕಿ ಇರುವ 2-3ಕೋಟಿ ಮಂದಿಗೆ ಲಸಿಕೆ ಹಾಕಿದರೆ ಎಲ್ಲರಿಗೂ ಒಂದು ಡೋಸ್ ನೀಡಿದಂತೆ ಆಗುತ್ತದೆ. ಇದರಿಂದ ಮೂರನೆ ಅಲೆ ಪ್ರಭಾವ ನಮ್ಮ ಮೇಲೆ ಬೀರುವುದು ಕಡಿಮೆ ಆಗುತ್ತದೆ. ಅಲ್ಲಿಯವರೆಗೆ ಮುನ್ನಚ್ಚರಿಕೆ ಕ್ರಮಗಳು ಮುಂದುವರೆಯುತ್ತದೆ ಎಂದರು.
ಪ್ರವಾಸಿ ತಾಣದಲ್ಲಿ ಜನ ಜಮಾಯಿಸುವುದು ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ, ಸಾವಿರಾರು ಮಂದಿ ಸೇರುವ ಮದುವೆಗಳು ನಡೆಯಬಾರದು. ಇದರಿಂದ ನಾವೇ ಮೂರನೇ ಅಲೆಗೆ ಆಹ್ವಾನ ಮಾಡಿದಂತೆ ಆಗುತ್ತದೆ. ಆದುದರಿಂದ ನಾವು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಕೊರೋನ ಸಂಬಂಧ ಯಾವುದೇ ಔಷಧಿಗಳ ಕೊರತೆ ಇಲ್ಲ. ಎಲ್ಲವನ್ನು ಶೇಖರಿಸಿ ಬಫರ್ ಸ್ಟಾಕ್ ಇಟ್ಟುಕೊಂಡಿದ್ದೇವೆ. ನಾವು ಈಗ ರಾಜ್ಯ ದಲ್ಲಿ ಮಕ್ಕಳ ತಜ್ಞರನ್ನು ಕೂಡ ನೇಮಕ ಮಾಡುತ್ತಿದ್ದೇವೆ. ಈಗಾಗಲೇ ಉಡುಪಿ ಜಿಲ್ಲೆಯ ಪಿಎಚ್‌ಸಿಗಳಿಗೆ ವೈದ್ಯರನ್ನು ನೇಮಕ ಮಾಡಲಾಗಿದೆ. ಒಂದು ವರ್ಷ ಗಳ ಕಡ್ಡಾಯ ಸೇವೆಗಾಗಿ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಪದವಿಧರರನ್ನು ಕೂಡ ಕಳುಹಿಸಿಕೊಟ್ಟಿದ್ದೇವೆ. ನೇರ ನೇಮಕಾತಿಯ 1740 ಮಂದಿಯಲ್ಲೂ ಉಡುಪಿ ಜಿಲ್ಲೆಗೂ ಕಳುಹಿಸಿಕೊಟ್ಟಿದ್ದೇವೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್, ಡಿಎಚ್‌ಓ ಡಾ.ನಾಗಭೂಷಣ ಉಡುಪ, ಸರ್ಜನ್ ಡಾ.ಮಧುಸೂದನ್ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಮೊದಲಾದ ವರು ಉಪಸ್ಥಿತರಿದ್ದರು.
2023ರೊಳಗೆ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣ
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಶ್ರಮದಿಂದ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿದೆ. ಜಿಲ್ಲಾಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಆದೇಶ ಪತ್ರ ಕೊಡಬೇಕಾಗಿದೆ. ಅದನ್ನು ನೀಡಿದ ಕೂಡಲೇ ಆ.15ರೊಳಗೆ ಕಟ್ಟಡಕ್ಕೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವ ಕಾರ್ು ಮಾಡಲಾಗುವುದು. ಮುಂದಿನ 15 ತಿಂಗಳೊಳಗೆ ಅಂದರೆ 2023ರ ಮೊದಲು ಜಿಲ್ಲಾಸ್ಪತ್ರೆಯ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಜಿಲ್ಲೆಯ ಜನತೆಯ ಸೇವೆಗೆ ಮುಕ್ತವಾಗಲಿದೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.
ಉಡುಪಿ ಜಿಲ್ಲೆಗೂ ಸರಕಾರಿ ವೈದ್ಯಕೀಯ ಕಾಲೇಜು
ಸರಕಾರಿ ವೈದ್ಯಕೀಯ ಕಾಲೇಜುಗಳು ಇಲ್ಲದ ಉಡುಪಿ ಸೇರಿದಂತೆ ರಾಜ್ಯದ 9-10 ಜಿಲ್ಲೆಗಳಲ್ಲಿ ಈ ವರ್ಷ ಖಾಸಗಿ ಜೊತೆ ಸೇರಿ ಪಿಪಿಪಿ ಮಾದರಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಲು ಉದ್ದೇಶಿಸಲಾಗಿದೆ. ಕೇಂದ್ರ ಸರಕಾರ ಈಗಾಗಲೇ ರೂಪಿಸಿರುವ ಮಾದರಿಯಲ್ಲಿ ಅವುಗಳನ್ನು ಸ್ಥಾಪಿಸಲಾಗು ವುದು ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಸರಕಾರಿ ಮತ್ತು ಖಾಸಗಿ ನಡುವೆ ಒಪ್ಪಂದ ಮಾಡಿ ಕೊಂಡು ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುವುದು. ಈಗಾಗಲೇ ಜಿಲ್ಲಾಡಳಿತ ಇದಕ್ಕಾಗಿ 30 ಎಕರೆ ಜಾಗವನ್ನು ಮೀಸಲಿಟ್ಟಿದೆ. ಹೊಸ ಜಿಲ್ಲಾಸ್ಪತ್ರೆ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಮೀಪದ ಎರಡು ಎಕರೆ ಜಾಗದಲ್ಲಿ ನಿರ್ಮಾಣ ಆಗುವ ಆಸ್ಪತ್ರೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಗಳು ಸಿದ್ಧ ಇದೆ. ಆದುದರಿಂದ ಇಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸುಲಭ ಆಗುತ್ತದೆ. ಶೀಘ್ರವೇ ಈ ಕಾರ್ಯ ಮಾಡಲಾಗುವುದು ಎಂದರು.