×
Ad

ಕಾರ್ಕಳಕ್ಕೆ ಸರಕಾರಿ ನರ್ಸಿಂಗ್ ಕಾಲೇಜು: ಸಚಿವ ಡಾ.ಸುಧಾಕರ್

Update: 2021-07-14 19:39 IST

ಬೆಳ್ಮಣ್, ಜು.14: ಕಾರ್ಕಳ ತಾಲೂಕಿಗೆ ಸರಕಾರಿ ನರ್ಸಿಂಗ್ ಕಾಲೇಜನ್ನು ಮಂಜೂರು ಮಾಡಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವು ದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರಕಟಿಸಿದ್ದಾರೆ.

ಕೋವಿಡ್ 3ನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಕಳ ಕ್ಷೇತ್ರದಾದ್ಯಂತ 15 ವರ್ಷದೊಳಗಿನ ಮಕ್ಕಳಿಗೆ ‘ವಾತ್ಸಲ್ಯ’ ಮಕ್ಕಳ ಆರೋಗ್ಯ ತಪಾಸಣಾ ಶಿಬಿರವನ್ನು ಬೆಳ್ಮಣ್‌ನ ಶ್ರೀಕೃಷ್ಣ ಸಭಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾರ್ಕಳದಲ್ಲಿ ಸರಕಾರಿ ನರ್ಸಿಂಗ್ ಕಾಲೇಜೊಂದನ್ನು ಪ್ರಾರಂಭಿಸಲು ರಾಜೀವ್ ಗಾಂಧಿ ಆರೋಗ್ಯ ವಿವಿಯ ಅನುಮತಿ ಸೇರಿದಂತೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಕೇವಲ ಸರಕಾರದ ಮಂಜೂರಾತಿ ಯೊಂದು ದೊರೆಯಬೇಕಾಗಿದೆ ಎಂದು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಮಾಡಿಕೊಂಡ ಮನವಿಗೆ ಪೂರಕವಾಗಿ ಮಾತನಾಡಿದ ಸಚಿವರು ತಾನು ಬೆಂಗಳೂರಿಗೆ ತೆರಳುತಿದ್ದಂತೆ ಇದಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಸಭೆಯಲ್ಲಿ ಘೋಷಿಸಿದರು.

ಕೋವಿಡ್ 3ನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾಗುವರೆಂಬುದನ್ನು ಈಗಲೇ ಹೇಳಲಾಗದಿದ್ದರೂ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಬೇಕಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಕಾರ್ಕಳ ಶಾಸಕ ಸುನೀಲ್‌ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಡೆಸುತ್ತಿರುವ ಮಕ್ಕಳ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಈ ದಿಸೆಯಲ್ಲಿ ಒಂದು ಅತ್ಯುತ್ತಮ ಕಾರ್ಯಕ್ರಮ. ಇದನ್ನು ರಾಜ್ಯದ ಕಾರ್ಯಕ್ರಮವಾಗಿ ಮಾಡಲು ಚಿಂತನೆ ನಡೆಸುವುದಾಗಿ ಅವರು ಪ್ರಕಟಿಸಿದರು.

ಈ ಶಿಬಿರಗಳಲ್ಲಿ 15ವರ್ಷದೊಳಗಿನವರ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಸಿ ಅವರಲ್ಲಿರುವ ದೈಹಿಕ ನ್ಯೂನ್ಯತೆ, ಸಮಸ್ಯೆ, ಪೌಷ್ಠಿಕ ಆಹಾರದ ಕೊರತೆಗಳನ್ನು ಕಂಡುಹಿಡಿದು ಅದಕ್ಕೆ ಬೇಕಾದ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರ ವನ್ನೂ, ಅಕ್ಷರ ದಾಸೋಹದ ಮಕ್ಕಳಿಗೆ ಆಹಾರದ ಕಿಟ್‌ಗಳನ್ನು ಇಲ್ಲಿ ವಿತರಿಸಲಾಗುತ್ತದೆ ಎಂದರು.

ಕೋವಿಡ್ ಎರಡನೇ ಅಲೆ ಇನ್ನೂ ಕೊನೆಗೊಂಡಿಲ್ಲ. ಪಕ್ಕದ ಕೇರಳದಲ್ಲಿ ಅದಿನ್ನೂ ಆಂತಕದ ಸ್ಥಿತಿಯಲ್ಲೇ ಇದೆ. ಹೀಗಾಗಿ ದ.ಕ. ಹಾಗೂ ಉಡುಪಿ ಜಿಲ್ಲೆಗಳ ಜನ ಇನ್ನೂ ಎಚ್ಚರದಲ್ಲೇ ಇರಬೇಕಾಗಿದೆ. ಕೋವಿಡ್ ನಿಯಂತ್ರಣಕ್ಕೆ ಲಸಿಕೆ ನೀಡಿಕೆಯೊಂದೇ ಪರಿಹಾರವಾಗಿದೆ. ಇದಕ್ಕಾಗಿ ಸರಕಾರ ವಿಶೇಷ ಪ್ರಯತ್ನ ನಡೆಸುತ್ತಿದೆ. ಮುಂದಿನ ವಾರದಿಂದ ಎಲ್ಲಾ ಜಿಲ್ಲೆಗಳಿಗೂ ಹೆಚ್ಟಚಿನ ಪ್ರಮಾಣದಲ್ಲಿ ಲಸಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು.

ರಾಜ್ಯದಲ್ಲೇ ಉಡುಪಿ ಜಿಲ್ಲೆ ಲಸಿಕೆ ನೀಡಿಕೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಇಲ್ಲಿ ಈಗಾಗಲೇ ಶೇ.45ರಷ್ಟು ಮಂದಿ ಲಸಿಕೆಯನ್ನು ಪಡೆದಿದ್ದಾರೆ. ಹೆಚ್ಚೆಚ್ಚು ಜನರು ಲಸಿಕೆಯನ್ನು ಪಡೆದುಕೊಳ್ಳುವುದರಿಂದ, ಮಾಸ್ಕ್‌ನ್ನು ಧರಿಸಿ, ಸುರಕ್ಷತಾ ಅಂತರ ಕಾಪಾಡಿಕೊಂಡು, ಗುಂಪು ಸೇರದಂತೆ ಜಾಗೃತೆ ವಹಿಸಿದರೆ ಮೂರನೇ ಅಲೆಯನ್ನು ಖಂಡಿತ ತಡೆಗಟ್ಟಬಹುದು ಎಂದು ಡಾ.ಸುಧಾಕರ್ ನುಡಿದರು.

ಅಧ್ಯಕ್ಷತೆ ವಹಿಸಿದ್ದ ಸುನೀಲ್‌ಕುಮಾರ್ ಮಾತನಾಡಿ, ಕಾರ್ಕಳ ತಾಲೂಕಿನ 40,000 ಮಕ್ಕಳನ್ನು ವಾತ್ಸಲ್ಯ ಯೋಜನೆಯಡಿ ವೈದ್ಯಕೀಯ ತಪಾಸಣೆಗೊಳ ಪಡಿಸಲಾಗುತ್ತದೆ. ಇದಕ್ಕಾಗಿ ಕ್ಷೇತ್ರದಾದ್ಯಂತ 400 ಶಿಬಿರಗಳನ್ನು ನಡೆಸಲಾಗು ತ್ತದೆ. ಅಂಗನವಾಡಿ ಮಕ್ಕಳು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಈಗಾಗಲೇ 20 ಶಿಬಿರಗಳನ್ನು ನಡೆಸಲಾಗಿದೆ ಎಂದರು.

ಮಕ್ಕಳ ತಪಾಸಣೆಯ ಬಳಿಕ ಅವರಿಗೆ ಸೂಕ್ತ ಚಿಕಿತ್ಸೆಯನ್ನೂ ನೀಡಲಾಗುತ್ತದೆ. ಅಗತ್ಯ ಬಿದ್ದರೆ ತಾಲೂಕು ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆ ಯಲ್ಲೂ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ. ಆಯುಷ್ಮಾನ್ ಕರ್ನಾಟಕ ಯೋಜನೆಯಲ್ಲಿ ಇದನ್ನು ಸೇರ್ಪಡೆಗೊಳಿಸಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಅವರು ಮನವಿ ಮಾಡಿದರು. ಸದ್ಯ ವ್ಯಾಕ್ಸಿನ್‌ಗೆ ಕೊರತೆಯಿದ್ದು, ಜಿಲ್ಲೆಗೆ ಹೆಚ್ಚು ವ್ಯಾಕ್ಸಿನ್ ಬಿಡುಗಡೆ ಮಾಡಬೇಕೆಂದು ಅವರು ಕೋರಿಕೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಿಗೆ ಪೌಷ್ಠಿಕಾಂಶದ ಕಿಟ್ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಕಿಟ್‌ಗಳನ್ನು ಸಚಿವರು ಸಾಂಕೇತಿಕವಾಗಿ ವಿತರಿಸಿದರು.

ವೇದಿಕೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯ ನಿರ್ದೇಶಕ ಡಾ.ಓಂಪ್ರಕಾಶ್ ಪಾಟೀಲ್, ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ.ಉದಯ ಕುಮಾರ್ ಎಂ.ಆರ್., ಜಿಪಂ ಸಿಇಓ ಡಾ.ನವೀನ್ ಭಟ್, ಡಿಎಚ್‌ಓ ಡಾ.ನಾಗಭೂಷಣ ಉಡುಪ, ಟಿಎಚ್‌ಓ ಡಾ.ಕೃಷ್ಣಾನಂದ ಶೆಟ್ಟಿ, ತಹಶೀಲ್ದಾರ್ ಪ್ರಕಾಶ್, ತಾಪಂ ಇಒ ಗುರುದತ್ತ್, ಬೆಳ್ಮಣ್ ಗ್ರಾಪಂ ಅಧ್ಯಕ್ಷ ಜನಾರ್ದನ ತಂತ್ರಿ, ಬೆಳ್ಮಣ್‌ನ ಎಸ್.ಕೆ.ಸಾಲ್ಯಾನ್, ಐಎಂಎ ರಾಜ್ಯಾಧ್ಯಕ್ಷ ಡಾ.ಸುರೇಶ್ ಕುಡ್ವ, ತಾಪಂ ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಜಿಪಂ ಸದಸ್ಯೆ ರೇಶ್ಮಾ ಉದಯ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ರಘುವೀರ್ ಶೆಣೈ ಕಾರ್ಯಕ್ರಮ ನಿರೂಪಿಸಿ, ಶಂಕರ್ ಕುಂದರ್ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News