ರಾಜ್ಯದಲ್ಲಿ 186 ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆ: ಸಚಿವ ಡಾ.ಸುಧಾಕರ್
ಹೆಬ್ರಿ, ಜು.14: ಕೋವಿಡ್ ಎರಡನೇ ಅಲೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಣವಾಯುವಾದ ಆಕ್ಸಿಜನ್‌ನ ಪ್ರಾಮುಖ್ಯತೆಯ ಅರಿವು ಉಂಟಾ ಗಿದೆ. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲೂ ಅಕ್ಸಿಜನ್ ಸುಲಭದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಸದ್ಯ 186 ಹೊಸ ಆಕ್ಸಿಜನ್ ಉತ್ಪಾದನಾ ಘಟಕದ ಪ್ರಾರಂಭಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್ ಲಿಮಿಟೆಡ್ (ಎಂಸಿಎಫ್) ಮಂಗಳೂರು ಇವರ ಕೊಡುಗೆಯಿಂದ ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ನೂತನವಾಗಿ ನಿರ್ಮಾಣಗೊಂಡ ಆಮ್ಲಜನಕ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ 186 ಆಕ್ಸಿಜನ್ ಘಟಕಗಳಲ್ಲಿ 50ನ್ನು ಪಿಎಂ ಕೇರ್ಸ್ ನಿಧಿಯಿಂದ, 28ನ್ನು ಎಂಸಿಎಫ್‌ನಿಂದ, 40ನ್ನು ರಾಜ್ಯಸರಕಾರದಿಂದ ಹಾಗೂ 67ನ್ನು ಸಿಎಸ್‌ಆರ್ ಫಂಡ್‌ನಿಂದ ನಿರ್ಮಿಸಲಾಗುತ್ತಿದೆ. ಇವೆಲ್ಲವೂ ಹವಾಮಾನದಿಂದ ಉತ್ಪಾದನೆ ಗೊಳ್ಳುವ ಆಮ್ಲಜನಕ ಘಟಕಗಳು. ಇವಲ್ಲದೇ ದ್ರವೀಕೃತ ಆಕ್ಸಿಜನ್ ಉತ್ಪಾದನೆ ಬೇರೆ ಇದೆ. ಇವುಗಳನ್ನು ಅಧಿಕ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ ಎಂದರು.
ಉಡುಪಿ ಜಿಲ್ಲೆಯ ಮೊದಲ ಆಮ್ಲಜನಕ ಉತ್ಪಾದನಾ ಘಟಕವನ್ನು ಎಂಸಿಎಫ್‌ನ ನೆರವಿನಿಂದ ಸುಮಾರು 18 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸ ಲಾಗಿದೆ. ಕೋವಿಡ್ ಮೊದಲ ಅಲೆಯ ವೇಳೆ ಚಿಕಿತ್ಸೆಗೆ ಕೇವಲ 400ರಿಂದ 500 ಮೆಟ್ರಿಕ್ ಟನ್ ಆಮ್ಲಜನಕ ಸಾಕಾಗಿತ್ತು. ಆದರೆ ಎರಡನೇ ಅಲೆಯ ವೇಳೆ ಇದರ ಪ್ರಮಾಣ 1200ರಿಂದ 1400 ಮೆಟ್ರಿಕ್ ಟನ್‌ಗೆ ಏರಿಕೆಯಾಗಿತ್ತು. ರಾಜ್ಯದಲ್ಲಿ ಆಗ ಸಿಗುತಿದ್ದುದು ಕೇವಲ 700ರಿಂದ 800 ಮೆಟ್ರಿಕ್ ಟನ್ ಮಾತ್ರ ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.
ಕೊನೆಗೆ ಕೇಂದ್ರ ಸರಕಾರದ ಸಕಾಲಿಕ ಕ್ರಮದಿಂದ ನಾವು ಸವಾಲನ್ನು ಯಶಸ್ವಿ ಯಾಗಿ ನಿಭಾಯಿಸಿದ್ದೇವೆ. ರಾಜ್ಯದಲ್ಲಿ ಒಂದು ಘಟನೆಯನ್ನು ಹೊರತು (ಚಾಮರಾಜನಗರ) ಪಡಿಸಿದರೆ, ಉಳಿದಂತೆ ಆಮ್ಲಜನಕದ ಕೊರತೆ ವಿಶೇಷವಾಗಿ ಬಾಧಿಸಲಿಲ್ಲ. ಆಮ್ಲಜನಕದ ವಿತರಣೆ, ಬಳಕೆಯಲ್ಲಿ ನಾವು ಮಾದರಿಯಾಗಿದ್ದೆವು ಎಂದವರು ನುಡಿದರು.
ಮುನ್ನೆಚ್ಚರಿಕೆ ವಹಿಸಿ: ತಜ್ಞರು ಇದೀಗ ಮೂರನೇ ಅಲೆಯ ಬಗ್ಗೆ ಮಾತನಾಡುತಿದ್ದಾರೆ. ಈಗಾಗಲೇ ಮೂರನೇ ಅಲೆ ಕೆಲವು ದೇಶಗಳಲ್ಲಿ ಕಾಣಿಸಿಕೊಂಡ ಮಾಹಿತಿ ಇದೆ. ಜನರ ತಪ್ಪು ನಡವಳಿಕೆಯಿಂದಾಗಿ ಮೂರನೇ ಅಲೆಗೆ ಆಹ್ವಾನ ನೀಡುತಿದ್ದಾರೆ. ಆದ್ದರಿಂದ ಮೂರನೇ ಅಲೆ ಯನ್ನು ತಡೆಯಲು ಪ್ರತಿಯೊಬ್ಬರು ವೈಯಕ್ತಿಕ ಮುನ್ನೆಚ್ಚರಿಕೆ ಕ್ರಮಗಳನ್ನು ಚಾಚೂತಪ್ಪದೇ ಪಾಲಿಸಬೇಕಾಗಿದೆ ಎಂದರು.
ಜನರು ಅನಗತ್ಯ ಗುಂಪು ಸೇರದೇ ಇದ್ದರೆ, ಸುರಕ್ಷತಾ ಅಂತರ ಕಾಪಾಡಿ ಕೊಂಡರೆ, ಕಡ್ಡಾಯವಾಗಿ ಮಾಸ್ಕ್ ಧರಿಸಿದರೆ ಮೂರನೇ ಅಲೆ ಬಾರದಂತೆ ತಡೆಗಟ್ಟಬಹುದು. ಮೂರನೇ ಅಲೆಯನ್ನು ತಡೆಯಲು ಜನರಿಂದ ಸಾಧ್ಯವಿದೆ ಎಂದು ಡಾ.ಸುಧಾಕರ್ ಹೇಳಿದರು.
ಇಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಕೊಡುಗೆಯಾಗಿ ನೀಡಿದ ಮಂಗಳೂರು ಎಂಸಿಎಫ್‌ನ ನಿರ್ದೇಶಕ ಕೆ.ಪ್ರಭಾಕರ ರಾವ್ ಮಾತನಾಡಿ, ಎಂಸಿಎಫ್‌ನ ಸಾಮಾಜಿಕ ಕಳಕಳಿಯ ಕಾರ್ಯಕ್ರಮವಾಗಿ ಹೆಬ್ರಿಯಲ್ಲಿ ಗಂಟೆಗೆ 3000ಲೀ. ಉತ್ಪಾದನೆಯ ಸಾಮರ್ಥ್ಯದ ಘಟಕ ನೀಡಿದ್ದು, ಈಗಾಗಲೇ ಮಂಗಳೂರಿನ ಇಎಸ್‌ಐ ಆಸ್ಪತ್ರೆಗೆ 5000ಲೀ ಘಟಕ ಈಗಾಗಲೇ ನೀಡಿದ್ದು, ಶೀಘ್ರದಲ್ಲೇ ವಿಟ್ಲದಲ್ಲಿ ಇನ್ನೊಂದು ಘಟಕ ಉದ್ಘಾಟನೆಗೊಳ್ಳಲಿದೆ ಎಂದರು.
ಕಾರ್ಕಳ ಶಾಸಕ ವಿ.ಸುನೀಲ್‌ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಬ್ರಿ ಸಮುದಾಯ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಹಾಗೂ ಅಜೆಕಾರು ಮತ್ತು ಬಜಗೋಳಿ ಪಿಎಚ್‌ಸಿಗಳನ್ನು ಸಿಎಚ್‌ಸಿ ಆಗಿ ಮೇಲ್ದರ್ಜೆಗೇರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ನಿರ್ದೇಶಕ ಡಾ.ಓಂಪ್ರಕಾಶ್ ಪಾಟೀಲ್, ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ.ಉದಯ ಕುಮಾರ್, ಜಿಲ್ಲಾಧಿಕಾರಿ ಜಿ.ಜಗದೀಶ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಹೆಬ್ರಿ ಗ್ರಾಪಂ ಅಧ್ಯಕ್ಷೆ ಮಾಲತಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗ ಭೂಷಣ್ ಉಡುಪ ಸ್ವಾಗತಿಸಿದರು.
45 ಹೊಸ ತಾಲೂಕುಗಳ ಆಸ್ಪತ್ರೆ ಮೇಲ್ದರ್ಜೆಗೆ
ಹೆಬ್ರಿಯೂ ಸೇರಿದಂತೆ ಹೊಸದಾಗಿ ರಚನೆಯಾದ 45 ತಾಲೂಕು ಕೇಂದ್ರಗಳಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರಗಳನ್ನು ಶೀಘ್ರವೇ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ ಘೋಷಿಸಿದರು.
ಕಾರ್ಕಳ ಶಾಸಕ ಸುನಿಲ್‌ಕುಮಾರ್ ಅವರ ಮನವಿಯಂತೆ ಅಜೆಕಾರು ಹಾಗೂ ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಇದೇ ವರ್ಷ ಮೇಲ್ದರ್ಜೆಗೇರಿಸುವುದಾಗಿಯೂ ಅವರು ಭರವಸೆ ನೀಡಿದರು.
ರಾಜ್ಯದಲ್ಲಿ ಕಳೆದ 20-30 ವರ್ಷಗಳಲ್ಲಿ ಆಗದ ಕೆಲಸವನ್ನು ಈ ಸರಕಾರ ಮಾಡಿದ್ದು, ರಾಜ್ಯದಲ್ಲಿ ಒಟ್ಟು ಸುಮಾರು 4000 ವೈದ್ಯರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದರು.