×
Ad

ಮಂಗಳೂರು: ಮಹಿಳಾ ಪೊಲೀಸ್ ಪೇದೆ ಸಹಿತ ಇಬ್ಬರಿಗೆ ಹಲ್ಲೆ; ಇಬ್ಬರು ಆರೋಪಿಗಳು ವಶಕ್ಕೆ

Update: 2021-07-14 21:49 IST

ಮಂಗಳೂರು, ಜು.14: ಉರ್ವ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯೊಂದಿಗೆ ದುಷ್ಕರ್ಮಿಗಳು ದುರ್ನಡತೆಯಿಂದ ನಡೆದು ಕೊಂಡು, ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.

ಪೊಲೀಸರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ನೊವೆಲ್ ಸಿಕ್ವೇರಾ, ಜಾನ್ ಸಿಕ್ವೇರಾ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.

ಹೆಡ್‌ಕಾನ್‌ಸ್ಟೇಬಲ್ ನಾರಾಯಣ, ಕಾನ್‌ಸ್ಟೇಬಲ್ ಪೂಜಾ ಹಿರೇಮಠ ಹಲ್ಲೆಗೊಳಗಾದವರು. ತಳ್ಳಾಟದಲ್ಲಿ ಗಾಯಗೊಂಡ ಇಬ್ಬರೂ ಪೊಲೀಸ ರನ್ನು ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಮೇ ತಿಂಗಳ ಕೊನೆಯಲ್ಲಿ ಉರ್ವ ಠಾಣಾ ವ್ಯಾಪ್ತಿ ಎರಡು ಪ್ರಕರಣಗಳು ದಾಖಲಾಗಿದ್ದವು. ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವವರು ನಿರ್ವಹಣಾ ಶುಲ್ಕ ಹಾಗೂ ನೀರು ಸಂಪರ್ಕ ಕೊಡುವುದರ ಕುರಿತು ಗಲಾಟೆ ನಡೆದಿತ್ತು. ಈ ಬಗ್ಗೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿತ್ತು. 17 ವರ್ಷದ ಬಾಲಕಿಗೆ ಹಲ್ಲೆ ನಡೆಸಿರುವುದು ಹಾಗೂ ಪೊಕ್ಸೊ ಕೇಸು ದಾಖಲಾಗಿತ್ತು. ಮತ್ತೊಂದು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು ಎಂದು ಮಾಹಿತಿ ನೀಡಿದರು.

ಎರಡೂ ಪ್ರಕರಣದಲ್ಲಿ ಅಪಾರ್ಟ್‌ಮೆಂಟ್‌ನ ಅಸೋಸಿಯೇಶನ್‌ನವರು ಮಾತನಾಡಿಕೊಂಡು ಡಿಸಿಪಿ ಕಚೇರಿಗೆ ಆಗಮಿಸಿದ್ದಾರೆ. ಪ್ರಕರಣವನ್ನು ಹಿಂಪಡೆಯಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾರೆ. ತನಿಖಾಧಿಕಾರಿಯಲ್ಲಿ ಹೇಳಿಕೆ ಕೊಡಲು ಡಿಸಿಪಿ ತಿಳಿಸಿ ಕಳುಹಿಸಿದ್ದಾರೆ. ನಂತರ ಅಪಾರ್ಟ್‌ಮೆಂಟ್ ಅಸೋಸಿಯೇಶನ್‌ನವರು ಠಾಣೆಗೆ ಆಗಮಿಸಿದ್ದಾರೆ. ಇನ್‌ಸ್ಪೆಕ್ಟರ್ ಕೊಠಡಿಯಲ್ಲಿ ಈ ಸಂಬಂಧ ಮಾತುಕತೆ ನಡೆಸುತ್ತಿದ್ದಾಗ ಆರೋಪಿಗಳು ಮೊಬೈಲ್‌ನಲ್ಲಿ ಶೂಟಿಂಗ್ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಅನುಚಿತವಾಗಿ ನಡೆದುಕೊಂಡಿದ್ದಾರೆ. ಮೊಬೈಲ್ ಎಳೆದು ಕೊಳ್ಳುವಾಗ ತಳ್ಳಾಟವಾಗಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ವಿವರಿಸಿದರು.

ಈ ಸಂದರ್ಭ ಮಹಿಳಾ ಪೇದೆಗೆ ಕಾಲಿಗೆ ಗಾಯವಾಗಿದೆ. ಗಲಾಟೆ ಬಿಡಿಸಲು ಹೋದ ಹೆಡ್‌ಕಾನ್‌ಸ್ಟೇಬಲ್ ಅವರ ಬಟ್ಟೆ ಹರಿದು ಹಾಕಿರುವ ಘಟನೆಯೂ ನಡೆದಿದೆ. ಪೊಲೀಸರೊಂದಿಗೆ ಅನುಚಿತವಾಗಿ ನಡೆದುಕೊಂಡವರ ವಿರುದ್ಧ ಐಪಿಸಿ ಸೆಕ್ಷನ್ 354 (ಹಲ್ಲೆ), 353 (ಸರಕಾರಿ ಕರ್ತವ್ಯಕ್ಕೆ ಅಡ್ಡಿ) ಅಡಿಯಲ್ಲಿ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರೊಂದಿಗೆ ದುರ್ವರ್ತನೆ ತೋರಿರುವ ಬಗ್ಗೆ ವೀಡಿಯೊ ದಾಖಲೆ ಇದೆ. ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದರು.

ಸಾರ್ವಜನಿಕರು ಠಾಣೆಗೆ ಬಂದ ಸಂದರ್ಭದಲ್ಲಿ ಪೊಲೀಸರೊಂದಿಗೆ ಶಾಂತರೀತಿಯಲ್ಲಿ ವರ್ತಿಸಬೇಕು. ಠಾಣೆಯಲ್ಲಿ ಸ್ಪಂದನೆ ಸಿಗದ ವೇಳೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕೇ ವಿನಃ ಅನುಚಿತ ವರ್ತನೆ ತೋರಬಾರದು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News