ವಲಸೆ ಕಾರ್ಮಿಕರ ವಿರುದ್ಧ ದೌರ್ಜನ್ಯ: ಲಿಬಿಯಾ, ಯುರೋಪ್ ದೇಶಗಳಿಗೆ ಆ್ಯಮ್ನೆಸ್ಟಿ ಖಂಡನೆ

Update: 2021-07-15 15:27 GMT

ಲಂಡನ್, ಜು.15: ದೇಶಕ್ಕೆ ವಾಪಸಾಗುತ್ತಿದ್ದ ವಲಸೆ ಕಾರ್ಮಿಕರ ವಿರುದ್ಧ ಲಿಬಿಯಾದಲ್ಲಿ ಭಯಾನಕ ದೌರ್ಜನ್ಯ ಎಸಗಿರುವುದು ಖಂಡನಾರ್ಹ ಎಂದು ಮಾನವಹಕ್ಕುಗಳ ಸಂಸ್ಥೆ ಆ್ಯಮ್ನೆಸ್ಟಿಇಂಟರ್‌ನ್ಯಾಷನಲ್ ಹೇಳಿದೆ.

ವಲಸೆ ಕಾರ್ಮಿಕರನ್ನು ಸಮುದ್ರದ ಮಧ್ಯೆಯೇ ತಡೆದು, ಮಕ್ಕಳು, ಮಹಿಳೆಯರು ಹಾಗೂ ಪುರುಷರ ವಿರುದ್ಧ ಲೈಂಗಿಕ ಕಿರುಕುಳ ಸಹಿತ ಭಯಾನಕ ದೌರ್ಜನ್ಯ ಎಸಗಲಾಗಿದ್ದು ಅವರನ್ನು ಉತ್ತರ ಆಫ್ರಿಕಾ ದೇಶಗಳಲ್ಲಿರುವ ಬಂಧನ ಕೇಂದ್ರಕ್ಕೆ ಬಲವಂತವಾಗಿ ವಾಪಾಸು ಕಳುಹಿಸಲಾಗಿದೆ. ಲಿಬಿಯಾದ ಈ ಕೃತ್ಯಕ್ಕೆ ಯುರೋಪಿಯನ್ ದೇಶಗಳು ಸಹಕಾರ ನೀಡುತ್ತಿರುವುದು ಖಂಡನೀಯ ಎಂದು ಆ್ಯಮ್ನೆಸ್ಟಿ ಹೇಳಿದೆ.

ಟ್ರಿಪೋಲಿಯ ಶರ ಅಲ್‌ಝವೀಯ ಸೇರಿದಂತೆ ಸಶಸ್ತ್ರ ಪಡೆಗಳ ಅಧೀನದಲ್ಲಿದ್ದ 2 ಬಂಧನ ಕೇಂದ್ರಗಳನ್ನು 2020ರ ಅಂತ್ಯದಲ್ಲಿ ಲಿಬಿಯಾದ ‘ಅಕ್ರಮ ವಲಸೆ ತಡೆ ಪ್ರಾಧಿಕಾರ’ ತನ್ನ ನಿಯಂತ್ರಣಕ್ಕೆ ಪಡೆದಿದ್ದು ಇಲ್ಲಿ ನೆಲೆಸಿದ್ದ ನೂರಾರು ನಿರಾಶ್ರಿತರು ಹಾಗೂ ವಲಸಿಗರು ಬಲವಂತಕ್ಕೆ ಒಳಗಾಗಿ ಅಲ್ಲಿಂದ ಕಾಣೆಯಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ. ಕುಡಿಯುವ ನೀರು ಬೇಕಿದ್ದರೆ ತಮ್ಮೊಂದಿಗೆ ದೈಹಿಕ ಸಂಬಂಧ ಬೆಳೆಸಬೇಕು ಎಂದು ಇಲ್ಲಿನ ಸಿಬಂದಿ ಮಹಿಳೆಯರನ್ನು ಬಲವಂತಗೊಳಿಸುತ್ತಿದ್ದಾರೆ. ಈ ಹಿಂಸೆ ತಾಳಲಾರದೆ ಇಬ್ಬರು ಯುವತಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ . ಲಿಬಿಯಾದಿಂದ ತಪ್ಪಿಸಿಕೊಂಡು ಬಂದಿರುವ 53 ನಿರಾಶ್ರಿತರು ಹಾಗೂ ವಲಸೆ ಕಾರ್ಮಿಕರನ್ನು ಸಂದರ್ಶಿಸಿ ಈ ಮಾಹಿತಿ ಪಡೆಯಲಾಗಿದೆ. ಜೊತೆಗೆ, ಲಿಬಿಯಾದ ಅಧಿಕಾರಿಗಳು ಹಾಗೂ ವಿಶ್ವಸಂಸ್ಥೆ ಪ್ರಕಟಿಸಿರುವ ಫೋಟೋ, ವೀಡಿಯೊಗಳನ್ನು ಪರಿಶೀಲಿ ಲಾಗಿದೆ ಎಂದು ಆ್ಯಮ್ನೆಸ್ಟಿ ಹೇಳಿದೆ.

ಅಧ್ಯಕ್ಷರಾಗಿದ್ದ ಗಡ್ಡಾಫಿಯ ಆಡಳಿತ 2011ರಲ್ಲಿ ಅಂತ್ಯವಾದ ಬಳಿಕ ಲಿಬಿಯಾದಲ್ಲಿ ಅರಾಜಕತೆಯ ಪರಿಸ್ಥಿತಿಯಿದೆ. ಯುರೋಪ್‌ನಲ್ಲಿ ಉತ್ತಮ ಬದುಕು ಅರಸಿ ಅಲ್ಲಿಗೆ ಅಕ್ರಮವಾಗಿ ತೆರಳುವ ವಲಸೆ ಕಾರ್ಮಿಕರನ್ನು ಸಾಗಿಸುವ ಕಳ್ಳಸಾಗಣೆದಾರರ ತಂಡಗಳಿವೆ. ಇವರನ್ನು ತಡೆಯಲು ಇಟಲಿ ಮತ್ತು ಯುರೋಪ್ ದೇಶಗಳು ಲಿಬಿಯಾದ ಕರಾವಳಿ ಕಾವಲು ಪಡೆಗೆ ಆರ್ಥಿಕ ನೆರವಿನ ಜೊತೆಗೆ ತರಬೇತಿಯನ್ನೂ ನೀಡುತ್ತಿದೆ.

ಆ್ಯಮ್ನೆಸ್ಟಿಯ ಹೊಸ ವರದಿ ಭಯಾನಕ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ವಿಭಾಗದ ಉಪನಿರ್ದೇಶಕಿ ಡಯಾನಾ ಎಲ್ಥಾವಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News