ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಸುರೇಖಾ ಸಿಕ್ರಿ ಹೃದಯಾಘಾತದಿಂದ ನಿಧನ
ಹೊಸದಿಲ್ಲಿ: ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಸುರೇಖಾ ಸಿಕ್ರಿ ಹೃದಯಾಘಾತದಿಂದ ಶುಕ್ರವಾರ ಬೆಳಿಗ್ಗೆ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಸುರೇಖಾ ಸಿಕ್ರಿ ಅವರು ಬ್ರೈನ್ ಸ್ಟ್ರೋಕ್ ನಿಂದ ಬಳಲುತ್ತಿದ್ದರು, ಇದನ್ನು ಅವರು ಸೆಪ್ಟೆಂಬರ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.
"ನನಗೆ ಹತ್ತು ತಿಂಗಳ ಹಿಂದೆ ಬ್ರೈನ್ ಸ್ಟ್ರೋಕ್ ಆಗಿತ್ತು. ಅಂದಿನಿಂದ ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಮಹಾಬಲೇಶ್ವರದಲ್ಲಿ ಶೂಟಿಂಗ್ ಮಾಡುವಾಗ ಸ್ನಾನಗೃಹದಲ್ಲಿ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿತ್ತು. ಅನಾರೋಗ್ಯದಿಂದಾಗಿ ನನಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ನಾನು ಶೀಘ್ರದಲ್ಲೇ ಸರಿಯಾಗುತ್ತೇನೆ ಎಂದು ವೈದ್ಯರು ಹೇಳಿದ್ದಾರೆ'' ಎಂದಿದ್ದರು.
ಕಳೆದ ವರ್ಷ, ಸುರೇಖಾ ಸಿಕ್ರಿ ಅವರಿಗೆ 'ಬದಾಯ್ ಹೋ' ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
1988 ರಲ್ಲಿ, ಅವರು 'ತಮಸ್' ಚಿತ್ರಕ್ಕಾಗಿ ನಂತರ 1995 ರಲ್ಲಿ 'ಮೈಮೊ' ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಶಸ್ತಿ ಗೆದ್ದುಕೊಂಡಿದ್ದರು.ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಪದವಿ ಪಡೆದ ಸುರೇಖಾ ಸಿಕ್ರಿ ಅವರಿಗೆ 1989 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಾಲಿವುಡ್‌ನಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರಗಳಾದ ಝುಬೈದಾ, ಮಿಸ್ಟರ್ ಮತ್ತು ಮಿಸೆಸ್ ಅಯ್ಯರ್ ಹಾಗೂ ರೇನ್‌ಕೋಟ್‌ನ ಸಣ್ಣ ಆದರೆ ಮಹತ್ವದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಟಿವಿಯಲ್ಲಿ, ಏಕ್ ಥಾ ರಾಜ ಏಕ್ ಥಿ ರಾಣಿ, ಪರ್ದೇಸ್ ಮೇ ಹೈ ಮೇರಾ ದಿಲ್, ಮಾ ಎಕ್ಸ್ಚೇಂಜ್, ಸಾತ್ ಫೆರೆ ಹಾಗೂ ಬಾಲಿಕಾ ವಧು ಮುಂತಾದ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.