"ಫಾ. ಸ್ಟ್ಯಾನ್ ಸ್ವಾಮಿ ಸಾವು ಭಾರತದ ಮಾನವ ಹಕ್ಕು ಇತಿಹಾಸದಲ್ಲಿ ಒಂದು ಕಳಂಕ"

Update: 2021-07-16 07:04 GMT

ಹೊಸದಿಲ್ಲಿ : "ಆದಿವಾಸಿ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ಅವರು ನ್ಯಾಯಾಂಗ ಬಂಧನಲ್ಲಿರುವಾಗ  ಸಾವನ್ನಪ್ಪಿರುವ ಘಟನೆ ಭಾರತದ ಮಾನವ ಹಕ್ಕುಗಳ ಇತಿಹಾಸದಲ್ಲಿ ಒಂದು ಕಳಂಕವಾಗಿ ಸದಾ ಉಳಿಯಲಿದೆ" ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ತಜ್ಞೆ ಮೇರಿ ಲಾಲೊರ್ ಹೇಳಿದ್ದಾರೆ.

ಮಾನವ ಹಕ್ಕು ಪ್ರತಿಪಾದಕರ ಪರಿಸ್ಥಿತಿ ಕುರಿತು ವಿಶ್ವ ಸಂಸ್ಥೆಯ ವಿಶೇಷ ವರದಿಗಾರ್ತಿಯಾಗಿರುವ ಅವರು  ಮುಂದುವರಿದು ಮಾತನಾಡುತ್ತಾ "ಎಲ್ಲಾ ಮಾನವ ಹಕ್ಕು ಹೋರಾಟಗಾರರನ್ನು ಮತ್ತು ಸೂಕ್ತ ಕಾನೂನಾತ್ಮಕ ಪುರಾವೆಗಳಿಲ್ಲದೆ ಬಂಧನದಲ್ಲಿರುವವರನ್ನು  ಬಿಡುಗಡೆಗೊಳಿಸಬೇಕೆಂದು ಸ್ಟಾನ್ ಸ್ವಾಮಿ ಪ್ರಕರಣ ಎಲ್ಲಾ ಸರಕಾರಗಳಿಗೆ ನೆನಪಿಸುವಂತಾಗಬೇಕು" ಎಂದು ಹೇಳಿದರು.

"ನವೆಂಬರ್ 2020ರಲ್ಲಿ ನಾನು ಸಹಿತ ಇತರ ವಿಶ್ವ ಸಂಸ್ಥೆಯ ತಜ್ಞರು ಭಾರತದ ಪ್ರಾಧಿಕಾರಗಳಿಗೆ ತಮ್ಮ ಅಂತರಾಷ್ಟ್ರೀಯ ಮಾನವ ಹಕ್ಕು  ಬದ್ಧತೆಗಳನ್ನು ನೆನಪಿಸಿದ್ದೇವೆ. ಈಗ ಮತ್ತೆ ಕೇಳುತ್ತೇನೆ. ಅವರನ್ನೇಕೆ ಬಿಡುಗಡೆಗೊಳಿಸಲಾಗಿರಲಿಲ್ಲ? ಅವರೇಕೆ ಕಸ್ಟಡಿಯಲ್ಲಿರುವಾಗಲೇ ಸಾವನ್ನಪ್ಪುವಂತಾಯಿತು?" ಎಂದು ಮೇರಿ ಪ್ರಶ್ನಿಸಿದ್ದಾರೆ.

"ಮಾನವ ಹಕ್ಕು ಪ್ರತಿಪಾದಕರೊಬ್ಬರಿಗೆ ಉಗ್ರವಾದಿ ಎಂಬ ಹಣೆಪಟ್ಟಿ ಕಟ್ಟುವುದಕ್ಕೆ ಯಾವುದೇ  ಸಮರ್ಥನೆಯಿಲ್ಲ ಹಾಗೂ  ಫಾದರ್ ಸ್ವಾಮಿ ಅವರಂತೆ ಆರೋಪ ಹೊತ್ತು ಬಂಧನಕ್ಕೊಳಗಾಗಿ ಹಾಗೂ ಹಕ್ಕುಗಳನ್ನು ನಿರಾಕರಿಸಲ್ಪಟ್ಟು  ಬೇರೆಯವರೂ ಸಾಯಬೇಕೆಂಬುದಕ್ಕೆ ಯಾವುದೇ ಕಾರಣವಿಲ್ಲ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News