×
Ad

ಸೋದೆ ಮಠದಿಂದ 116 ಎಕರೆ ಪ್ರದೇಶದಲ್ಲಿ ವನ ಅಭಿವೃದ್ಧಿ

Update: 2021-07-16 19:50 IST

ಉಡುಪಿ, ಜು.16: ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶ್ರೀಸೋದೆ ಮಠದ ಶ್ರೀ ವಾದಿರಾಜ ಗುರುಗಳ ಜನ್ಮಸ್ಥಳವಾದ ಕುಂದಾಪುರ ಸಮೀಪದ ಹೂವಿನಕೆರೆ ಯಲ್ಲಿರುವ ಸೋದೆ ಶ್ರೀವಾದಿರಾಜ ಮಠದ 116 ಎಕ್ರೆ ಜಮೀನಿನಲ್ಲಿ ವಿಭಿನ್ನ ಜಾತಿಯ ವೃಕ್ಷ ಸಂಕುಲಗಳನ್ನು ಬೆಳೆಸಲು ಸೋದೆ ಮಠದ ಪೀಠಾಧಿಪತಿ ಶ್ರೀ ವಿಶ್ವವಲ್ಲಭ ತೀರ್ಥರು ಸಂಕಲ್ಪಿಸಿದ್ದಾರೆ.

ಈ ಪ್ರದೇಶದಲ್ಲಿ ಶ್ರೀಗಂಧ ಹಾಗೂ ಸಾಗವಾನಿ ವೃಕ್ಷವನ್ನು ಬೆಳೆಸುವು ದರೊಂದಿಗೆ ಅನೇಕ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವ ನಾನಾ ಬಗೆಯ ಹಣ್ಣಿನ ಗಿಡ-ಮರಗಳು, ಪರಿಸರಕ್ಕೆ ಶುದ್ಧ ಆಮ್ಲಜನಕ ನೀಡುವ ವೃಕ್ಷಗಳು, ಆಯುರ್ವೇದ ಶಾಸ್ತ್ರಕ್ಕೆ ಸಂಬಂಧಿಸಿದ ಔಷಧೀಯ ಗುಣವುಳ್ಳ ಮರ ಗಳನ್ನು ನೆಡುವುದರೊಂದಿಗೆ ಭೂಮಿಯ ಅಂತರ್ಜಲ ಮಟ್ಟ ವೃದ್ಧಿಸಲು ಜಮೀನಿನ ಸುತ್ತಲೂ 5 ಅಡಿ ಆಳದ ತೋಡು ಮತ್ತು ಜಮೀನಿನ ಒಳಭಾಗ ದಲ್ಲಿ ಇಂಗು ಗುಂಡಿ ಸಹಿತ ಹಿರಿದಾದ ಒಂದು ಮದಗವನ್ನು ನಿರ್ಮಿಸಲು ಉದ್ದೇಶಿಸಿದ್ದಾರೆ.

ಈ ಇಡೀ ಯೋಜನೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಸ್ಥಳೀಯರೇ ಆದ ಅಕ್ಷಯ ಶೆಟ್ಟಿ ಹಾಗೂ ಸುಷ್ಮಾ ರಾವ್ ನಿರ್ವಹಿಸಲಿದ್ದಾರೆ. ವಿದೇಶದಲ್ಲಿ ತಾವು ನಿರ್ವಹಿಸುತ್ತಿದ್ದ ವೃತ್ತಿಯನ್ನು ತ್ಯಜಿಸಿ ತಮ್ಮ ಹುಟ್ಟೂರಿನಲ್ಲಿ ಸಾಧನೆ ಮಾಡುವ ಹುಮ್ಮಸ್ಸಿನಿಂದ ಹಸಿರುನಾಡು ಎಂಬ ಸಂಸ್ಥೆಯನ್ನು ಆರಂಭಿಸಿರುವ ಇವರು ಯೋಜನೆಯ ಮೇಲ್ವಿಚಾರಣೆ ಹೊಣೆಯನ್ನು ಹೊತ್ತಿದ್ದಾರೆ.

ಈ ಸಂಬಂಧ ಗುರುವಾರ ಹೂವಿನಕೆರೆಯ ಪ್ರಸ್ತಾವಿತ ಜಮೀನಿನಲ್ಲಿ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮ ಸೋದೆ ಮಠಾಧೀಶರಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯ ಅತಿಥಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಈ ಯೋಜನೆಯು ತಮಗೂ ಹಾಗೂ ಸ್ಥಳೀಯರಿಗೂ ಹೆಮ್ಮೆ ತಂದುಕೊಡುವ ವಿಷಯವಾಗಿದೆ. ಇದರಿಂದ ಪರಿಸರದಲ್ಲಿ ಅನೇಕ ಧನಾತ್ಮಕ ಪ್ರಗತಿ ಕಂಡು ಬರಲಿದ್ದು, ಈ ಯೋಜನೆಗೆ ಬೇಕಾದ ಎಲ್ಲಾ ಸಹಾಯ, ಮಾರ್ಗಸೂಚನೆ ನೀಡಲು ಬದ್ಧನಾಗಿರುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಕೆ.ರಾಜು ಭಾಗವಹಿಸಿದ್ದರು. ಸೋದೆ ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ರತ್ನಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News