ಅಕ್ರಮ ಪಡಿತರ ಅಕ್ಕಿ ಸಾಗಾಟ ಆರೋಪ : ಓರ್ವನ ಬಂಧನ
ಅಮಾಸೆಬೈಲು, ಜು.16: ಕಾರಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಓರ್ವನನ್ನು ಆಹಾರ ನಿರೀಕ್ಷಕರ ನೇತೃತ್ವದ ತಂಡ ಹೊಸಂಗಡಿ ಗ್ರಾಮದ ಮಂಡಗದ್ದೆ ಎಂಬಲ್ಲಿ ಜು.15ರಂದು ಬಂಧಿಸಿದೆ.
ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ನಿವಾಸಿ ಇಮ್ತಿಯಾಝ್ (49) ಬಂಧಿತ ಆರೋಪಿ. ಖಚಿತ ಮಾಹಿತಿಯಂತೆ ಕುಂದಾಪುರ ತಾಲೂಕು ಆಹಾರ ನಿರೀಕ್ಷಕ ಎಚ್.ಎಸ್.ಸುರೇಶ್, ಅಮಾಸೆಬೈಲು ಠಾಣೆ ಪೊಲೀಸ್ ಉಪನಿರೀಕ್ಷಕ ಸುಬ್ಬಣ್ಣ ಬಿ. ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಈತ ಜನರಿಗೆ ಸರಕಾರದಿಂದ ಉಚಿತವಾಗಿ ದೊರೆಯುವ ಅನ್ನಭಾಗ್ಯದ ಅಕ್ಕಿಯನ್ನು ಹೊಸಂಗಡಿ ಪರಿಸರದ ಮನೆಗಳಿಗೆ ಹೋಗಿ ಖರೀದಿಸಿ ಹೆಚ್ಚಿನ ಬೆಲೆಗೆ ಅಂಗಡಿಗೆ ಮಾರಾಟ ಮಾಡುವುದಾಗಿ ತಿಳಿದುಬಂದಿದೆ. ಕಾರಿನಲ್ಲಿದ್ದ 7,200 ರೂ. ಮೌಲ್ಯದ 300 ಕೆ ಜಿ ಅಕ್ಕಿ, 1,00,000 ರೂ. ಮೌಲ್ಯದ ಕಾರು, 6000 ರೂ. ಮೌಲ್ಯದ ತೂಕ ಮಾಡುವ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.