ಬಕ್ರೀದ್ ಹಿನ್ನೆಲೆ; 25ಕ್ಕೂ ಅಧಿಕ ಚೆಕ್‌ಪೋಸ್ಟ್: ಕಮಿಷನರ್ ಶಶಿಕುಮಾರ್
Update: 2021-07-17 12:54 IST
ಮಂಗಳೂರು, ಜು.17: ಜು.21ರಂದು ಆಚರಿಸುವ ಬಕ್ರೀದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ಮುಂಜಾಗರೂಕತಾ ಕ್ರಮವಾಗಿ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ 25ಕ್ಕೂ ಅಧಿಕ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಕಮಿಷನರೇಟ್ ವ್ಯಾಪ್ತಿಯ ಪ್ರತಿಯೊಂದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲದೆ ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಗಡಿ ಭಾಗಗಳಲ್ಲಿ ಕೂಡಾ ಚೆಕ್ ಪೋಸ್ಟ್ ತೆರೆದು ಶಾಂತಿಯುತವಾಗಿ ಬಕ್ರೀದ್ ಆಚರಿಸಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಈಗಾಗಲೇ ಎಲ್ಲಾ ಠಾಣೆ ವ್ಯಾಪ್ತಿಯಲ್ಲಿ ಎಲ್ಲಾ ಧರ್ಮಗಳ ಪ್ರಮುಖರ ಸಮ್ಮುಖದಲ್ಲಿ ಶಾಂತಿಸಭೆ ನಡೆಸಲಾಗಿದೆ. ಧಾರ್ಮಿಕ ಕೇಂದ್ರಗಳ ಸುತ್ತ ಮುತ್ತ ಬಂದೋಬಸ್ತ್ ಮಾಡಲಾಗಿದೆ. ಸರಕಾರದ ಸೂಚನೆಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಈದ್ಗಾಗಳಲ್ಲಿ ಪ್ರಾರ್ಥನೆ ನಡೆಸಲು ಅವಕಾಶ ನೀಡಲಾಗುವುದಿಲ್ಲ ಎಂದು ಕಮಿಷನರ್ ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.