ಹಳಗೇರಿ ಅರಣ್ಯ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪನೆ: ಖಂಬದಕೋಣೆ ಗ್ರಾಪಂ ಎದುರು ಗ್ರಾಮಸ್ಥರಿಂದ ಪ್ರತಿಭಟನೆ

Update: 2021-07-17 12:32 GMT

ಬೈಂದೂರು, ಜು.17: ಖಂಬದಕೋಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳಗೇರಿಯ ಗೋವಿನಗುಡ್ಡವನ್ನು ಕೈಗಾರಿಕಾ ವಲಯವನ್ನಾಗಿ ಮಾಡಲು ಹೊರಟಿರುವ ಸರಕಾರದ ಕ್ರಮವನ್ನು ವಿರೋಧಿಸಿ ವಿವಿಧ ಸಂಘಟನೆಗಳ ನೇತೃತ್ವ ದಲ್ಲಿ ಗ್ರಾಮಸ್ಥರು ಶನಿವಾರ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

‘ಅರಣ್ಯ ಉಳಿಸಿ’ ಆಂದೋಲನವನ್ನುದ್ದೇಶಿಸಿ ಮಾತನಾಡಿದ ಹಳಗೇರಿ ಶ್ರೀವನದುರ್ಗಾ ರೈತಶಕ್ತಿ ಗುಂಪು ಇದರ ಸಂಯೋಜಕ ಯು.ಪ್ರಭಾಕರ ಶೆಟ್ಟಿ, ಖಂಬದಕೋಣೆಯ ಹಳಗೇರಿಯಲ್ಲಿ ಸರ್ವೆ ನಂ. 166/ಪಿ1 ಗೋವಿನಗುಡ್ಡದ 66 ಎಕ್ರೆ ಜಾಗದಲ್ಲಿ 53 ಎಕ್ರೆ ಜಾಗವನ್ನು ಕೈಗಾರಿಕಾ ವಲಯವಾಗಿ ಮಾಡಲು ಸರಕಾರ ಹೊರಟಿರುವುದು ಖಂಡನೀಯ. ಈ ಸರ್ವೆ ನಂಬರ್ ಜಾಗವು ಕಂದಾಯ ಇಲಾಖೆಯದ್ದಾಗಿದ್ದು ಗ್ರಾಪಂಗೆ ಪರಂಬುಕು ಮಾಡಲಾಗಿದೆ ಎಂದು ತಿಳಿಸಿದರು.

ಅರಣ್ಯ ಇಲಾಖೆ ಮೂಲಕ ಗ್ರಾಪಂ ಇಲ್ಲಿ ಗಿಡ ನೆಟ್ಟು ದಟ್ಟ ಕಾಡು ಬೆಳೆಸ ಲಾಗಿದೆ. ಈ ಅರಣ್ಯ ಕಡಿದು ಕೈಗಾರಿಕೆ ನಡೆಸಲು ಸರಕಾರ ನಿರ್ಧರಿ ಸಿದ್ದು ಗ್ರಾಮಸ್ಥರ ಅಭಿಪ್ರಾಯ ಪಡೆದಿಲ್ಲ. ಇದರಿಂದ ಈ ಅರಣ್ಯ ಪ್ರದೇಶದಲ್ಲಿರುವ 250 ರೈತ ಕುಟುಂಬಗಳು ಬೀದಿಪಾಲಾಗಲಿವೆ. ಅಲ್ಲದೆ ಶಬ್ಧ ಮಾಲಿನ್ಯ, ವಾಯು ಮಾಲಿನ್ಯದಿಂದ ಇಡೀ ಪ್ರದೇಶ ತತ್ತರಿಸಲಿದೆ. 150 ಮೀಟರಿಗೂ ಅಧಿಕ ಎತ್ತರವಿರುವ ಗುಡ್ಡ ಕಡಿದಲ್ಲಿ ಭೂ ಕುಸಿತ ಉಂಟಾ ಗುವ ಸಾಧ್ಯತೆ ಇದೆ ಎಂದು ಅವರು ಆರೋಪಿಸಿದರು.

ಗ್ರಾಮಸ್ಥರಾದ ವೆಂಕಪ್ಪಶೆಟ್ಟಿ, ರಾಜೇಂದ್ರ ಗಾಣಿಗ, ಸುಬ್ಬಣ್ಣ ಶೆಟ್ಟಿ ಮೊದಲಾದ ವರು ಮಾತನಾಡಿದರು. ಈ ಸಂದರ್ಭದಲ್ಲಿ ಖಂಬದಕೋಣೆ ಗ್ರಾಪಂ ಅಧ್ಯಕ್ಷ ಸುಖೇಶ್ ಶೆಟ್ಟಿ, ಸದಸ್ಯ ರಾಜೇಶ್ ದೇವಾಡಿಗ, ಪಿಡಿಒ ಪೂರ್ಣಿಮಾ, ಗ್ರಾಮಲೆಕ್ಕಿಗ ಹನುಮಂತ ಅವರಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಹಳಗೇರಿ ದೇವಸ್ಥಾನದ ಬಳಿಯಿಂದ ಸಾಗಿಬಂದ ಮೆರವಣಿಗೆಯಲ್ಲಿ ಹಳಗೇರಿ, ತೆಂಕಬೆಟ್ಟು, ಗುಮ್ಮಿ ತೋಟ, ಖಂಬದಕೋಣೆ ಹಾಗೂ ನಾಗೂರು ಗ್ರಾಮಗಳ ನೂರಾು ಗ್ರಾಮಸ್ಥರು ಪಾಲ್ಗೊಂಡಿದ್ದರು.

ವನದುರ್ಗಾ ರೈತಶಕ್ತಿ ಗುಂಪಿನ ಉಪ ಸಂಯೊಜಕ ರಾಮಕೃಷ್ಣ ಕಾರಂತ, ಹಳಗೇರಿ ಶ್ರೀಕೊಕ್ಕೇಶ್ವರ ಭಜನಾ ಸಂಘದ ಅಧ್ಯಕ್ಷ ಶಂಕರ್ ದೇವಾಡಿಗ, ಸದಸ್ಯರಾದ ರಾಜೇಂದ್ರ ಗಾಣಿಗ, ಪ್ರವೀಣ್ ಶೆಟ್ಟಿ, ಗಂಗಾಧರ ದೇವಾಡಿಗ, ಸತೀಶ್ ಪೂಜಾರಿ, ನಾಗೇಂದ್ರ ಗಾಣಿಗ, ದಸಂಸ ಬೈಂದೂರು ವಲಯದ ನರಸಿಂಹ ಹಳಗೇರಿ, ಮಂಜು ಹಳಗೇರಿ, ಶಿವರಾಮ್, ಬಸವೇಶ್ವರ ಭಜನಾ ಮಂದಿರ, ಕಾಲಬೈರವ ಸೇವಾ ಸಂಘ ತೆಂಕಬೆಟ್ಟು, ಸ್ತ್ರೀ ಶಕ್ತಿ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಟನೆಗಳ ಪದಾಧಿಕಾರಿಗಳು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಕಾಡನ್ನು ಉಳಿಸಿ ನಮ್ಮನ್ನು ಬದುಕಲು ಬಿಡಿ’

ಸ್ಥಳೀಯರಿಗೆ ಮಾಹಿತಿ ನೀಡದೆ ಹಾಗೂ ಸಾಧಕ-ಬಾಧಕ ಚರ್ಚಿಸದೇ ಕೈಗಾರಿಕಾ ವಲಯ ಮಾಡಲು ಹೊರಟಿರುವುದು ಜನವಿರೋಧಿ ನೀತಿಯಾಗಿದೆ. ನಮ್ಮಲ್ಲಿ ಯಾವುದೇ ಕೈಗಾರಿಕೆ ನಡೆಸಲು ಬಿಡುವುದಿಲ್ಲ. ಇದರಿಂದ ಎಕ್ರೆಗಟ್ಟಲೇ ವಿಸ್ತೀರ್ಣದ ಕಾಡು ನಾಶವಾಗಲಿದೆ. ಕಾಡನ್ನೇ ನಂಬಿ ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತಿರುವ ಬಡ ಜನರ ಮೇಲೆ ದಬ್ಬಾಳಿಕೆ ಸರಿಯಲ್ಲ. ಒಂದೊಮ್ಮೆ ಕೈಗಾರಿಕ ವಲಯವಾದರೆ ಅರಣ್ಯ ನಾಶದ ಜೊತೆ, ಕಾಡು ಪ್ರಾಣಿಗಳಿಗೂ ತೊಂದರೆಯಾಗಲಿದೆ. ಅಂತರ್ಜಲ ಮಟ್ಟ ಕುಸಿಯುವುದಲ್ಲದೆ, ಭೂ ಕುಸಿತ ಭೀತಿ ಎದುರಾಗಲಿದೆ. ನಮಗೆ ನಮ್ಮ ಕಾಡು ಬೇಕು, ಕಾಡನ್ನು ಉಳಿಸಿ ನಮ್ಮನ್ನು ಬದುಕಲು ಬಿಡಿ. ಅರಣ್ಯ ನಾಶಕ್ಕೆ ಅವಕಾಶ ನೀಡದಿರಿ ಎಂಬ ಒಕ್ಕೋರಲ ಆಗ್ರಹ ಪ್ರತಿಭಟನೆಯಲ್ಲಿ ಕೇಳಿ ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News