ಭಾರೀ ಮಳೆ: ದ.ಕ.ಜಿಲ್ಲೆಯಲ್ಲಿ 12 ಮನೆಗಳಿಗೆ ಹಾನಿ
Update: 2021-07-17 18:16 IST
ಮಂಗಳೂರು, ಜು.17: ದ.ಕ.ಜಿಲ್ಲಾದ್ಯಂತ ಶನಿವಾರ ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ಭಾರೀ ಮಳೆಯಾಗಿದ್ದರೆ, ಮಧ್ಯಾಹ್ನ ಸ್ವಲ್ಪ ಹೊತ್ತು ಮಳೆ ಬಿಡುವು ಪಡೆದುಕೊಂಡಿತ್ತು. ಗುರುವಾರ ಮತ್ತು ಶುಕ್ರವಾರ ಸುರಿದ ಸತತ ಮಳೆಯ ಪರಿಣಾಮವು ಶನಿವಾರ ಮತ್ತಷ್ಟು ಹಾನಿಯಾಗಿದೆ.
ಶನಿವಾರ ಮತ್ತೆ ಹಲವು ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿವೆ, ಗುಡ್ಡ ಜರಿದಿವೆ. ತೋಟವೊಂದರ ಅಡಿಕೆ ಮರಗಳಿಗೆ ಹಾನಿ ಯಾಗಿದೆ. 10 ಭಾಗಶಃ ಮತ್ತು 2 ಸಂಪೂರ್ಣ ಸಹಿತ 12 ಮನೆಗಳಿಗೆ ಹಾನಿಯಾಗಿವೆ. ಅದರಲ್ಲಿ ಮಂಗಳೂರು ತಾಲೂಕಿನ 2, ಬಂಟ್ವಾಳದ 3, ಬೆಳ್ತಂಗಡಿಯ 1, ಮೂಡುಬಿದಿರೆಯ 4, ಕಡಬದ 1, ಮುಲ್ಕಿಯ 1ಮನೆ ಸೇರಿದೆ. ಇದರೊಂದಿಗೆ 2021ರ ಎಪ್ರಿಲ್ 1ರಿಂದ ಈವರೆಗೆ ಭಾಗಶಃ 420 ಮನೆಗಳಿಗೆ ಮತ್ತು 75 ಮನೆಗಳು ಸಂಪೂರ್ಣ ಹಾನಿಯಾಗಿದೆ.
ಶನಿವಾರ ಮಂಗಳೂರು ತಾಲೂಕಿನ ಕೊಂಪದವು ಗ್ರಾಮದ ಸರೋಜಿನಿಯವರ ಅಡಿಕೆ ತೋಟಕ್ಕೆ ಅಪಾರ ಹಾನಿಯಾಗಿದೆ. ಬಜ್ಪೆ ಕೊರಗ ಕಾಲನಿಯ ಮನೆಯೊಂದು ಭಾಗಶಃ ಹಾನಿಯಾಗಿದೆ ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.