ಉಡುಪಿಯಲ್ಲಿ ಮುಂದುವರಿದೆ ಮಳೆ: ಬಾವಿ, ಕಿರು ಸೇತುವೆಗೆ ಹಾನಿ
ಉಡುಪಿ, ಜು.17: ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತಿದ್ದ ಮಳೆ ಇಂದು ಮುಂದುವರಿದಿದೆ. ಧಾರಾಕಾರವಾಗಿ ಸುರಿಯು ತ್ತಿರುವ ಮಳೆಯಿಂದ ಮನೆ ಹಾಗೂ ಸೊತ್ತುಗಳಿಗೆ ಅಪಾರ ಪ್ರಮಾಣದ ಹಾನಿ ಮುಂದುವರಿದಿದೆ. ಶುಕ್ರವಾರ ಬೈಂದೂರು ತಾಲೂಕಿನಲ್ಲಿ ಮನೆಯೊಂದರ ಬಾವಿ, ಶೌಚಾಲಯ ಸಂಪೂರ್ಣ ಕುಸಿದಿದ್ದು, ಅಮಾಸೆಬೈಲು ಸಮೀಪ ಕಿರು ಸೇತುವೆಯೊಂದು ಕೊಚ್ಚಿಕೊಂಡು ಹೋಗಿದೆ.
ಬೈಂದೂರು ತಾಲೂಕು ನಾವುಂದ ಗ್ರಾಮದ ಶೇಷಗಿರಿ ಗಾಣಿಗ ಅವರ ಮನೆಯ ಕುಡಿಯುವ ನೀರಿನ ಬಾವಿಯೊಂದು ಅಳವಡಿಸಿರುವ ಪಂಪ್‌ಸೆಟ್ ನೊಂದಿಗೆ ನೆಲದೊಳಗೆ ಕುಸಿದಿದೆ. ಇದರಿಂದ ಬಾವಿ ಸಂಪೂರ್ಣ ವಾಗಿ ಹಾನಿಗೊಂಡಿದೆ. ಅದೇ ಗ್ರಾಮದ ಲಕ್ಷ್ಮಣ ಮಡಿವಾಳೆ ಎಂಬವರ ಮನೆಯ ಶೌಚಾಲಯವೂ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಇದರಿಂದ ಲಕ್ಷಾಂತರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಅಮಾಸೆಬೈಲು ಗ್ರಾಪಂ ವ್ಯಾಪ್ತಿಯ ಜಡ್ಡಿನಗದ್ದೆ, ಬಾರೆಬೆಟ್ಟು, ಹಂದಿಮನೆಯನ್ನು ಸಂಪರ್ಕಿಸುವ ಕಿರುಸೇತುವೆಯೊಂದು ಜೋರುಮಳೆಗೆ ನಿನ್ನೆ ಕುಸಿದಿದ್ದು, ಇದರಿಂದ ಅಲ್ಲಿನ ನಿವಾಸಿಗರ ಸಂಪರ್ಕ ಕಡಿತಗೊಂಡಿದೆ. 2014ರಲ್ಲಿ ನಿರ್ಮಾಣಗೊಂಡಿದ್ದ ಈ ಕಿರು ಸೇತುವೆ ಕಳಪೆ ಕಾಮಗಾರಿ ಯಿಂದಾಗಿ ಕುಸಿದಿದೆ ಎಂಬುದು ಸ್ಥಳೀಯರ ದೂರಾಗಿದೆ.
ಬೈಂದೂರು ತಾಲೂಕು ಕೆರ್ಗಾಲು ಗ್ರಾಮದ ಬಚ್ಚಿ ಹಾಗೂ ಗೋಳಿಹೊಳೆ ಗ್ರಾಮದ ನಾಗು ಮರಾಠಿ ಎಂಬವರ ದನದ ಕೊಟ್ಟಿಗೆಗಳಿಗೆ ಭಾಗಶ: ಹಾನಿ ಯಾಗಿದ್ದು, ಒಟ್ಟು ಸುಮಾರು 80,000ರೂ.ನಷ್ಟದ ಅಂದಾಜು ಮಾಡಲಾಗಿದೆ. ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ವಾಸುದೇವ ಆಚಾರಿ ಅವರ ಮನೆಯ ಜಾನುವಾರು ಕೊಟ್ಟಿಗೆಗೂ ಹಾನಿಯಾಗಿದ್ದು 65,000ರೂ. ನಷ್ಟವಾಗಿದೆ.
ಹೆಬ್ರಿ ತಾಲೂಕಿನ ಕೆರೆಬೆಟ್ಟು ಗ್ರಾಮದ ಜಯಕರ ಶೆಟ್ಟಿ ಇವರ ಪಕ್ಕಾ ಮನೆ ನಿನ್ನೆಯ ಗಾಳಿ-ಮಳೆಯಿಂದ ಹಾನಿಗೊಂಡಿದ್ದು ಒಟ್ಟು 95,000ರೂ. ಗಳಿಗೂ ಅಧಿಕ ನಷ್ಟವಾಗಿದೆ. ಕಾಪು ತಾಲೂಕು ಎಲ್ಲೂರು ಗ್ರಾಮದ ವಿಶ್ವನಾಥ ಮುಖಾರಿ ಎಂಬವರ ಮನೆಗೆ 50,000ರೂ. ಹಾಗೂ ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ರತಿ ಪೂಜಾರಿ ಎಂಬವರ ಮನೆಗೆ 25,000 ರೂ.ನಷ್ಟದ ಅಂದಾಜು ಮಾಡಲಾಗಿದೆ.