ಬಿಯರ್ ಬಾಟಲಿಯಿಂದ ಹಲ್ಲೆ: ದೂರು
ಮಂಗಳೂರು, ಜು.17: ಕುಡಿದು ಗಲಾಟೆ ಮಾಡುತ್ತಿದ್ದವರನ್ನು ಪ್ರಶ್ನಿಸಿದ ವ್ಯಕ್ತಿಗೆ ಬಿಯರ್ ಬಾಟಲಿ ಮತ್ತು ಹೆಲ್ಮೆಟ್‌ನಿಂದ ಹಲ್ಲೆ ನಡೆಸಿರುವ ಘಟನೆ ಜು.16ರಂದು ತಡರಾತ್ರಿ ಪದವು ಗ್ರಾಮದ ದೈವಸ್ಥಾನವೊಂದರ ಸಮೀಪ ನಡೆದಿದೆ.
ಪ್ರೇಮನಾಥ ಆಚಾರ್ಯ ಹಲ್ಲೆಗೊಳಗಾದವರು. ಪ್ರೇಮನಾಥ ಅವರು ರಾತ್ರಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ತನ್ನ ಮನೆ ಎದುರು ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಯಾರೋ ಕಿರುಚಾಡುತ್ತಿದ್ದ ಶಬ್ದ ಕೇಳಿ ನೋಡಿದಾಗ ಅಲ್ಲಿ ಅವಿನಾಶ್, ಕಾರ್ತಿಕ್, ಪ್ರೀತಂ, ಮೋಹಿತ್, ಗಣೇಶ್, ಪುನೀತ್, ಪ್ರಾಣೇಶ್ ಮತ್ತು ಧೀರಜ್ ಎಂಬವರು ಮದ್ಯಪಾನ ಮಾಡುತ್ತಾ ಬೈದಾಡಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಇದನ್ನು ಕಂಡು ಪ್ರೇಮನಾಥ್ ಅವರು ಇಲ್ಲಿ ಕುಡಿದು ಗಲಾಟೆ ಮಾಡುವುದು ಬೇಡ ಎಂದು ಹೇಳಿದರು. ಆಗ ಆರೋಪಿಗಳು ಪ್ರೇಮನಾಥ ಅವರಿಗೆ ಬಿಯರ್ ಬಾಟಲಿ, ಮರದ ಸೋಂಟೆ ಮತ್ತು ಹೆಲ್ಮೆಟ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.