ಬೀದಿ ಗುಡಿಸುವ ಕೈ ಆಡಳಿತ ಸೂತ್ರ ಹಿಡಿದಾಗ... ಈ ಮಹಿಳೆಯ ಯಶೋಗಾಥೆ ಓದಲೇಬೇಕು
ಜೋಧಪುರ, ಜು.18: ರಾಜಸ್ಥಾನ ಆಡಳಿತಾತ್ಮಕ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾದವರಲ್ಲಿ 40 ವರ್ಷ ವಯಸ್ಸಿನ ಆಶಾ ಕಂದಾರ ಒಬ್ಬರು. ಆದರೆ ಈ ಮಹಿಳೆಯ ಸಾಧನೆ ಗಮನಾರ್ಹ. ಈಗ ಇವರು ರಾಜ್ಯ ಆಡಳಿತಾತ್ಮಕ ಸೇವೆಯ ಹಿರಿಯ ಅಧಿಕಾರಿಣಿ.
ಎರಡು ಮಕ್ಕಳ ತಾಯಿಯಾಗಿರುವ ಆಶಾರನ್ನು ಎಂಟು ವರ್ಷಗಳ ಹಿಂದೆ ಪತಿ ತೊರೆದು ಹೋಗಿದ್ದಾರೆ. ಪೋಷಕರ ಬೆಂಬಲದೊಂದಿಗೆ ಓದು ಮುಂದುವರಿಸಿದ ಆಶಾ ಪದವಿ ಪಡೆದು 2018ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡರು. ಕೋವಿಡ್-19 ಸೋಂಕಿನ ಕಾರಣದಿಂದಾಗಿ ಎರಡು ಹಂತದ ಪರೀಕ್ಷೆಯ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಕಳೆದ ವಾರ ಫಲಿತಾಂಶ ಪ್ರಕಟಿಸಲಾಗಿದೆ.
ಈ ನಡುವೆ ಇಬ್ಬರು ಮಕ್ಕಳನ್ನು ಸಾಕುವ ಹೊಣೆ ಹೊಂದಿದ್ದ ಆಶಾ ಜೋಧಪುರ ಪಾಲಿಕೆಯಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ಉದ್ಯೋಗಕ್ಕೆ ಸೇರಿಕೊಂಡರು. ಕೈಯಲ್ಲಿ ಪೊರಕೆ ಹಿಡಿದು ಜೋಧಪುರ ನಗರದ ರಸ್ತೆ ಗುಡಿಸುತ್ತಿದ್ದರು.
"ಯಾವ ಕೆಲಸ ಕೂಡಾ ಕೀಳಲ್ಲ; ನಾನು 2019ರಲ್ಲಿ ಮೈನ್ಸ್ ಪರೀಕ್ಷೆಗೆ ಹಾಜರಾಗಿದ್ದೆ. ಆದರೆ ಫಲಿತಾಂಶ ಬರುವ ಮುನ್ನ ನಾನು ಪಾಲಿಕೆಯಲ್ಲಿ ಕೆಲಸಕ್ಕೆ ಸೇರಿದೆ. ನಾನು ಓದುತ್ತಲೇ ಇದ್ದೆ. ಇದೀಗ ಫಲಿತಾಂಶ ನಿಮ್ಮೆದುರು ಇದೆ" ಎಂದು ಎನ್‌ಡಿಟಿವಿ ಜತೆ ಮಾತನಾಡಿದ ಅವರು ಹೇಳಿದರು.
ತಂದೆಯೇ ತನ್ನ ಸಾಧನೆಗೆ ಸ್ಫೂರ್ತಿ ಎಂದು ಅವರು ಹೇಳುತ್ತಾರೆ. "ನನ್ನ ತಂದೆ ಸುಶಿಕ್ಷಿತರು. ಅವರಿಗೆ ವಿದ್ಯೆಯ ಬೆಲೆ ಗೊತ್ತಿತ್ತು. ಅವರು ನಮಗೆ ಬೋಧಿಸಿ ಓದು ಮುಂದುವರಿಸುವಂತೆ ಮಾಡಿದರು. ಸೌಲಭ್ಯವಂಚಿತರಿಗೆ ನೆರವಾಗುವ ದೃಷ್ಟಿಯಿಂದ ನಾನು ಆಡಳಿತಾತ್ಮಕ ಸೇವೆ ಆಯ್ಕೆ ಮಾಡಿಕೊಂಡೆ. ಶಿಕ್ಷಣ ಎಲ್ಲಕ್ಕೂ ಉತ್ತರ. ಅದು ಅವಕಾಶದ ಬಾಗಿಲು ತೆರೆಯುತ್ತದೆ" ಎಂದು ಅಭಿಪ್ರಾಯಪಟ್ಟರು.