ಬಿಹಾರ ಸಿಎಂ ವಿರುದ್ಧ ದೂರು ನೀಡಿದ ಐಎಎಸ್ ಅಧಿಕಾರಿ!
ಪಾಟ್ನಾ, ಜು.18: ಶನಿವಾರ ಆಡಳಿತಾತ್ಮಕ ಸೇವೆಗೆ ಗುಡ್‌ಬೈ ಹೇಳಿದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ನೇರವಾಗಿ ಪೊಲೀಸ್ ಠಾಣೆಗೆ ಬಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಇತರ ಹಲವು ಮಂದಿ ಉನ್ನತಾಧಿಕಾರಿಗಳ ವಿರುದ್ಧ ದೂರು ನೀಡಿ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ.
1987ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಸುಧೀರ್ ಕುಮಾರ್, ಗರ್ದನಿಬಾಗ್ ಪೊಲೀಸ್ ಠಾಣೆಗೆ ಮಧ್ಯಾಹ್ನದ ವೇಳೆ ಆಗಮಿಸಿ ಲಿಖಿತ ದೂರು ಸ್ವೀಕರಿಸಿದ ಬಗ್ಗೆ ಸ್ವೀಕೃತಿಯನ್ನು ಪಡೆಯಲು ನಾಲ್ಕು ಗಂಟೆ ಕಾಯಬೇಕಾಯಿತು ಎಂದು ಹೇಳಲಾಗಿದೆ.
"ಇದು ಫೋರ್ಜರಿ ಪ್ರಕರಣವಾಗಿದೆ. ದೂರಿನಲ್ಲಿ ಹೆಸರಿಸಲಾಗಿರುವ ಹೆಸರುಗಳಲ್ಲಿ ತಳಮಟ್ಟದಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳೂ ಸೇರಿದ್ದಾರೆ. ಯಾರ ಹೆಸರನ್ನೂ ನಾನು ಇಲ್ಲಿ ಉಲ್ಲೇಖಿಸುವುದಿಲ್ಲ" ಎಂದು ಕಂದಾಯ ಮಂಡಳಿಯ ಸದಸ್ಯರೂ ಆಗಿರುವ ಅವರು ಸುದ್ದಿಗಾರರಿಗೆ ತಿಳಿಸಿದರು. ಆದಾಗ್ಯೂ ದೂರಿನಲ್ಲಿ ಸಿಎಂ ಹೆಸರೂ ಇದೆಯೇ ಎಂದು ಪದೇ ಪದೇ ಕೇಳಿದಾಗ ಹೌದು ಎಂಬ ಉತ್ತರ ಬಂತು.
ದೂರಿನಲ್ಲಿ ಇದೆ ಎಂದು ಅವರು ಒಪ್ಪಿಕೊಂಡ ಇನ್ನೊಂದು ಹೆಸರು ಐಪಿಎಸ್ ಅಧಿಕಾರಿ ಮನು ಮಹಾರಾಜ್ ಅವರದ್ದು. ಪಾಟ್ನಾದ ಮಾಜಿ ಎಸ್‌ಎಸ್‌ಪಿ ಆಗಿರುವ ಮನು ಇದೀಗ ಡಿಐಜಿ ಶ್ರೇಣಿಗೆ ಭಡ್ತಿ ಪಡೆದು ಬೇರೆಡೆ ಕರ್ತವ್ಯದಲ್ಲಿದ್ದಾರೆ.
ಮುಂದಿನ ವರ್ಷ ನಿವೃತ್ತರಾಗಬೇಕಿದ್ದ ಸುಧೀರ್ ಕುಮಾರ್ ಉದ್ಯೋಗ ನೇಮಕಾತಿ ಹಗರಣವೊಂದರಲ್ಲಿ ಆರೋಪಿಯಾಗಿ ಮೂರು ವರ್ಷ ಜೈಲುವಾಸ ಅನುಭವಿಸಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್ ಇವರಿಗೆ ಜಾಮೀನು ನೀಡಿತ್ತು. ದೂರಿನ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು. ದಾಖಲೆಗಳನ್ನು ತಿರುಚಿದ ಆರೋಪ ಇದಾಗಿದೆ ಎಂದು ಸ್ಪಷ್ಟಪಡಿಸಿದರು.
"ಬಿಹಾರದ ಕಾನೂನು ವ್ಯವಸ್ಥೆಯನ್ನು ನೋಡಿ. ಐಎಎಸ್ ಅಧಿಕಾರಿಯನ್ನು ನಾಲ್ಕು ಗಂಟೆ ಕಾಯಿಸಲಾಯಿತು. ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ನಾನು ನೀಡಿದ ದೂರಿಗೆ ಸ್ವೀಕೃತಿ ಮಾತ್ರ ನೀಡಲಾಗಿದೆ. ಈ ಎಲ್ಲ ದಾಖಲೆಗಳೊಂದಿಗೆ ಮಾರ್ಚ್‌ನಲ್ಲಿ ಶಾಸ್ತ್ರಿನಗರ ಠಾಣೆಗೆ ಹೋದಾಗಲೂ ಇಂಥದ್ದೇ ಅನುಭವ ಆಗಿತ್ತು" ಎಂದು ಹೇಳಿದರು.
"ನಾನು ಹಿಂದೆ ನೀಡಿದ ದೂರಿನ ಬಗ್ಗೆ ಏನು ಪ್ರಗತಿಯಾಗಿದೆ ಎಂಬ ಮಾಹಿತಿಯನ್ನು ಆರ್‌ಟಿಐ ಮೂಲಕ ಪಡೆಯಲು ನಡೆಸಿದ ಯತ್ನವೂ ವಿಫಲವಾಗಿದೆ" ಎಂದು ವಿವರಿಸಿದರು.