ಸಂಸದೀಯ ಗುಂಪನ್ನು ಪುನರ್ರಚಿಸಿದ ಸೋನಿಯಾ ಗಾಂಧಿ, ಪಟ್ಟಿಯಲ್ಲಿ ಶಶಿ ತರೂರ್, ಮನೀಶ್ ತಿವಾರಿಗೆ ಸ್ಥಾನ

Update: 2021-07-18 19:55 GMT

ಹೊಸದಿಲ್ಲಿ,ಜು.18: ಸಂಸತ್ ನ ಮುಂಗಾರು ಅಧಿವೇಶನ ಸೋಮವಾರ ಆರಂಭಗೊಳ್ಳಲಿರುವಂತೆಯೇ, ಕಾಂಗ್ರೆಸ್ ಸಂಸದೀಯ ಸಮಿತಿಗಳನ್ನು ಪಕ್ಷಾಧ್ಯಕ್ಷೆ ಸೋನಿಯಾಗಾಂಧಿ ಪುನಾರಚಿಸಿದ್ದಾರೆ. ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆಗಾಗಿ ಆಗ್ರಹಿಸಿದ್ದ್ದ ಕೆಲವು ಭಿನ್ನಮತೀಯರಿಗೂ ಈ ಸಮಿತಿಗಳಲ್ಲಿ ಸ್ಥಾನ ನೀಡಿದ್ದಾರೆ.

‘‘ಕಾಂಗ್ರೆಸ್ ಸಂಸದೀಯ ಸಮಿತಿ ಯ ಅಧ್ಯಕ್ಷೆಯಾಗಿರುವ ನಾನು ಸಂಸತ್ನ ಉಭಯ ಸದನಗಳಲ್ಲಿ ನಮ್ಮ ಪಕ್ಷವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತರಿಪಡಿಸುವುದಕ್ಕಾಗಿ ಸಂಸದೀಯ ಸಮಿತಿಗಳನ್ನು ಪುನಾರಚಿಸಲು ನಿರ್ಧರಿಸಿದ್ದೇನೆ’’ ಎಂದು ಸೋನಿಯಾಗಾಂಧಿ ರವಿವಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

 ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಪುನಶ್ಚೇತನ ನೀಡಬೇಕೆಂದು ಆಗ್ರಹಿಸಿ ಕಳೆದ ವರ್ಷ ಸೋನಿಯಾಗೆ ಪತ್ರ ಬರೆದಿದ್ದ 23 ಮಂದಿ ಕಾಂಗ್ರೆಸ್ ಮುಖಂಡರ ಗುಂಪಿನಲ್ಲಿದ್ದ ಮನೀಶ್ ತಿವಾರಿ ಹಾಗೂ ಶಶಿತರೂರ್ ಅವರನ್ನು ಲೋಕಸಭೆಯ ಏಳು ಮಂದಿ ಸದಸ್ಯರ ಸಂಸದೀಯ ಸಮಿತಿಗೆ ನೇಮಕಗೊಳಿಸಲಾಗಿದೆ.ಸಂಸತ್ ಅಧಿವೇಶನದ ಅವಧಿಯಲ್ಲಿ ಈ ಸಮಿತಿಗಳು ಪ್ರತಿದಿನವೂ ಸಭೆ ಸೇರಲಿದ್ದು, ಸಂಸತ್ ಕಲಾಪಗಳ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲಿವೆ ಎಂವರು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಅಧೀರ್ ರಂಜನ್ ಚೌಧರಿ ಮುಂದು ವರಿಯಲಿದ್ದಾರೆ. ಗೌರವ್ ಗೊಗೊಯಿ ಅವರು ಕೂಡಾ ಲೋಕಸಭೆಯಲ್ಲಿ ಪಕ್ಷದ ಉಪನಾಯಕರಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಲೋಕಸಭೆಯಲ್ಲಿ ಕೆ.ಸುರೇಶ್ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ನ ಮುಖ್ಯ ಸಚೇತಕರಾಗಿರುವರು. ರಣವೀತ್ಸಿಂಗ್ ಬಿಟ್ಟು ಹಾಗೂ ಮಾಣಿಕ್ಯಂ ಠಾಗೋರ್ ಅವರು ಕೂಡಾ ಸಚೇತರಾಗಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.

ಕಾಂಗ್ರೆಸ್ ನ ಹಿರಿಯ ನಾಯಕರಾದ ಅಂಬಿಕಾ ಸೋನಿ,ಪಿ.ಚಿದಂಬರಂ ಹಾಗೂ ದಿಗ್ವಿಜಯ ಸಿಂಗ್ಅವರನ್ನು ರಾಜ್ಯಸಭಾದ ಸಂಸದೀಯ ಸಮಿತಿಯ ಸದಸ್ಯರಾಗಿ ನೇಮಿಸಲಾಗಿದೆ. ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಸದ ನಾಯಕರಾಗಿ ಹಾಗೂ ಆನಂದ್ ಶರ್ಮಾ ಅವರು ಉಪನಾಯಕರಾಗಿ ಮುಂದುವರಿಯಲಿದ್ದಾರೆ. ಜೈರಾಮ್ ರಮೇಶ್ ರಾಜ್ಯಸಭೆಯ ಮುಖ್ಯ ಸಚೇತಕರಾಗಿರುವರು.

ಸಂಸತ್ ನ ಮುಂಗಾರು ಅಧಿವೇಶನವು ಜುಲೈ 19ರಿಂದ ಆಗಸ್ಟ್ 13ರವರೆಗೆ ನಡೆಯಲಿದೆ. ರಾಜ್ಯಸಭೆ ಹಾಗೂ ಲೋಕಸಭೆಯ ಕಲಾಪಗಳು ಬೆಳಗ್ಗೆ 11ರಿಂದ ಆರಂಭಗೊಂಡು ಸಂಜೆ 6:00ಗಂಟೆಯವರೆಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News