"ಬಕ್ರೀದ್ ಗಾಗಿ ಕೋವಿಡ್ ನಿಯಮ ಸಡಿಲಿಕೆ ವಿರುದ್ಧ ಕೋರ್ಟ್ ಗೆ ತೆರಳುತ್ತೇವೆ": ಕೇರಳ ಸರಕಾರಕ್ಕೆ ಐಎಮ್ಎ ಎಚ್ಚರಿಕೆ
ಹೊಸದಿಲ್ಲಿ: ಕೋವಿಡ್ ಮೂರನೇ ಅಲೆಯು ಸನ್ನಿಹಿತವಾದ ಸಂದರ್ಭದಲ್ಲಿ ಈದ್ ಉಲ್ ಅದ್ಹಾ ಅಥವಾ ಬಕ್ರೀದ್ ಗಿಂತ ಮುಂಚಿತವಾಗಿ ರಾಜ್ಯದಲ್ಲಿನ ಕೋವಿಡ್ ನಿರ್ಬಂಧಗಳನ್ನು ಸಡಿಲಿಸುವುದರ ವಿರುದ್ಧ ಭಾರತದ ಉನ್ನತ ವೈದ್ಯರ ಸಂಸ್ಥೆ ಭಾರತೀಯ ವೈದ್ಯಕೀಯ ಸಂಘವು ರವಿವಾರ ಕೇರಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಜನರ ಹಿತಾಸಕ್ತಿಯನ್ನು ಮನದಲ್ಲಿಟ್ಟುಕೊಂಡು ಈ ಆದೇಶವನ್ನು ಹಿಂತೆಗೆದುಕೊಳ್ಳದಿದ್ದರೆ ಸುಪ್ರೀಂಕೋರ್ಟ್ ಗೆ ತೆರಳುವುದಾಗಿ ಸಂಘವು ಎಚ್ಚರಿಕೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಜನ ಸೇರುವುದಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರೂ ಕೇರಳ ಸರಕಾರವು ಕೋವಿಡ್ ಪ್ರಕರಣಗಳ ಮಧ್ಯೆಯೇ ಈ ನಿರ್ಧಾರ ಕೈಗೊಂಡದ್ದು ನಮಗೆ ನೋವು ತಂದಿದೆ ಎಂದು ಐಎಮ್‌ಎ ತಿಳಿಸಿದೆ.
ಜಮ್ಮುಕಾಶ್ಮೀರ, ಉತ್ತರಪ್ರದೇಶ ಹಾಗೂ ಉತ್ತರಾಂಚಲ ಸೇರಿದಂತೆ ಉತ್ತರದ ಹಲವಾರು ರಾಜ್ಯಗಳು ಈಗಾಗಲೇ ಹಲವು ಧಾರ್ಮಿಕ ಯಾತ್ರೆಗಳನ್ನು ನಿಷೇಧಿಸಿದೆ. ಆದರೆ ಕೇರಳ ಸರಕಾರ ಈ ಹೆಜ್ಜೆ ತೆಗೆದುಕೊಂಡಿರುವುದು ನಿಜಕ್ಕೂ ದುರದೃಷ್ಟಕ ಎಂದು ಹೇಳಿಕೆ ಉಲ್ಲೇಖಿಸಿದೆ. ಕೇರಳ ಸರಕಾರವು ಬುಧವಾರದಂದಿನ ಬಕ್ರೀದ್ ಆಚರಣೆಗಾಗಿ ಲಾಕ್ ಡೌನ್ ಅನ್ನು ಸಡಿಲಗೊಳಿಸಿತ್ತು.