ಜು.19ರಿಂದ ಎಸೆಸೆಲ್ಸಿ ಪರೀಕ್ಷೆ: ದ.ಕ. ಜಿಲ್ಲೆಯಲ್ಲಿ 179 ಪರೀಕ್ಷಾ ಕೇಂದ್ರಗಳು ಸಜ್ಜು
ಮಂಗಳೂರು : ಜು.19 ಮತ್ತು 22ರಂದು ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆಗೆ ದ.ಕ. ಜಿಲ್ಲೆಯಲ್ಲಿ 179 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸ ಲಾಗಿದೆ. ಪರೀಕ್ಷಾ ಪೂರ್ವ ಸಿದ್ಧತೆಗಳು ಸಂಪೂರ್ಣಗೊಂಡಿದ್ದು, ಕೊರೋನ ಮಾರ್ಗಸೂಚಿ ಅನ್ವಯ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 29,351 ರೆಗ್ಯುಲರ್ ವಿದ್ಯಾರ್ಥಿಗಳು, 694 ಖಾಸಗಿ, 2,050 ಶಾಲಾ ಪುನರಾವರ್ತಿತ ಅಭ್ಯರ್ಥಿಗಳು, 538 ಖಾಸಗಿ ಪುನರಾವರ್ತಿತ ಸೇರಿದಂತೆ ಒಟ್ಟು 32,636 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.
ಈಗಾಗಲೇ ಒಂಬತ್ತು ಕೊರೋನ ಸೋಂಕಿತ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಅವರಿಗೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸೂಕ್ತ ವ್ಯವಸ್ಥೆಯೊಂದಿಗೆ ಪರೀಕ್ಷೆಗೆ ನಡೆಸಲಾಗುವುದು. ಕೋವಿಡ್ ಕೇರ್ ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸಹಕಾರ ನೀಡಲಿದ್ದಾರೆ.
ಪರೀಕ್ಷೆ ಬರೆಯುವವರಲ್ಲಿ 441 ಮಂದಿ ಕೇರಳ ವಿದ್ಯಾರ್ಥಿಗಳಾಗಿದ್ದು, ಅವರಲ್ಲಿ 121 ಮಕ್ಕಳು ತಲಪಾಡಿ ಮೂಲಕ ಆಗಮಿಸಲಿದ್ದಾರೆ. ಅವರಿಗೆ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ. ಆದರೆ ಅವರೊಂದಿಗೆ ಬರುವ ಹೆತ್ತವರಿಗೆ ಆರ್‌ಟಿಪಿಸಿಆರ್ ವರದಿ ಕಡ್ಡಾಯಗೊಳಿಸಲಾಗಿದೆ.
ಈ ಬಾರಿ ಕೊರೋನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ವಾಸವಿರುವ ಪ್ರದೇಶದಿಂದ 4 ಕಿ.ಮೀ. ವ್ಯಾಪ್ತಿಯೊಳಗೆ ಪರೀಕ್ಷಾ ಕೇಂದ್ರ ಇರುವಂತೆ ನೋಡಿಕೊಳ್ಳಲಾಗಿದೆ. ಶೇ.50ರಷ್ಟು ವಿದ್ಯಾರ್ಥಿಗಳು ಬಸ್ ವ್ಯವಸ್ಥೆಗಾಗಿ ಬೇಡಿಕೆ ಸಲ್ಲಿಸಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ ಮಕ್ಕಳ ಜತೆಗೆ ಒಎಂಆರ್ ಶೀಟ್ ಆಧಾರದಲ್ಲಿ ಪರೀಕ್ಷೆ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಮಾದರಿ ಪರೀಕ್ಷೆಯನ್ನು ಕೂಡ ನಡೆಸ ಲಾಗಿದೆ. ಈಗಾಗಲೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ರಾಜ್ಯವ್ಯಾಪಿ ಅಧ್ಯಾಪಕರು ವಿಚಾರಿಸಿದ್ದಾರೆ. ಕೋವಿಡ್ ಲಕ್ಷಣ ಗೋಚರಿಸಿದರೆ ಆಯಾ ವಿದ್ಯಾರ್ಥಿಯ ಮನೆಯ ಗೂಗಲ್ ಮ್ಯಾಪ್‌ನ್ನು ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಗೆ ಕಳುಹಿಸಿಕೊಡಲಿದ್ದು, ಆ ವಿದ್ಯಾರ್ಥಿಯನ್ನು ಕರೆದೊಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.