×
Ad

ದ.ಕ.ಜಿಲ್ಲೆಯಲ್ಲಿ ಧಾರಾಕಾರ ಮಳೆ : 12 ಮನೆಗಳಿಗೆ ಹಾನಿ

Update: 2021-07-18 19:47 IST

ಮಂಗಳೂರು, ಜು.18: ಬಂಗಾಳ ಕೊಲ್ಲಿಯ ಉಪಸಾಗರದಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದ ರವಿವಾರವೂ ದ.ಕ.ಜಿಲ್ಲಾದ್ಯಂತ ಭಾರೀ ಮಳೆಯಾಗಿದೆ. ಮುಂಜಾನೆಯಿಂದ ಸತತವಾಗಿ ಧಾರಾಕಾರ ಮಳೆ ಸುರಿದಿದೆ. ಮಧ್ಯಾಹ್ನದ ವೇಳೆ ಸ್ವಲ್ಪ ಬಿಡುವು ಪಡೆದುಕೊಂಡ ಮಳೆಯು ಸಂಜೆಯ ಬಳಿಕ ಮತ್ತೆ ಬಿರುಸು ಪಡೆದಿದೆ.

ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ದ.ಕ. ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದೆ. ರವಿವಾರವೂ ಅನೇಕ ಕಡೆ ಗುಡ್ಡ ಜರಿದಿದೆ, ವಿದ್ಯುತ್ ಕಂಬ-ಮರಗಳು ನೆಲಕ್ಕೆ ಉರುಳಿವೆ. ಪರಿಣಾಮ ಜಿಲ್ಲೆಯ 3 ಮನೆಗಳು ಸಂಪೂರ್ಣ ನೆಲಸಮವಾಗಿದ್ದರೆ 9 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಮಂಗಳೂರು ತಾಲೂಕಿನ ಕೊಂಪದವು ಗ್ರಾಮದ ಜಾನಕಿ ಎಂಬವರ ಮನೆ ಸಮೀಪದ ದನದ ಹಟ್ಟಿಗೆ ಹಾನಿಯಾಗಿದೆ. ಕುಂಜತ್ತಬೈಲ್ ಗ್ರಾಮದ ಬಸವನ ನಗರದ ಜಯಲಕ್ಷ್ಮಿ ಎಂಬವರ ಮನೆಗೆ, ಬಪ್ಪನಾಡು ಗ್ರಾಮದ ಬಾಳೆಹಿತ್ಲು ಎಂಬಲ್ಲಿನ ಶಾಂತಾ ಎಂಬವರ ಮನೆಗೆ, ಮಂಜನಾಡಿ ಗ್ರಾಮದ ಮನೆಗೆ ಗುಡ್ಡ ಕುಸಿದ ಪರಿಣಾಮ ಭಾಗಶಃ ಹಾನಿಯಾಗಿದೆ. ಬಳ್ಕುಂಜೆ ಗ್ರಾಮದ ಗೋಪಾಲ ಭಂಡಾರಿ ಎಂಬವರ ಬಾವಿ ಕುಸಿದು ಅಪಾರ ನಷ್ಟವಾಗಿದೆ.

ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಜ್ಜಿನಡ್ಕದ ತೋಡಿನ ಬದಿಯ ತಡೆಗೊಡೆ ಕುಸಿದ ಪರಿಣಾಮ ಇದಕ್ಕೆ ಹೊಂದಿಕೊಂಡ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಜು.19ರಂದು ಕೂಡ ದ.ಕ.ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮತ್ತು ಜು.20ರಿಂದ 22ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಹಾಗೂ ವಿಜ್ಞಾನಿ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News