ಕೇಂದ್ರ ಸರಕಾರದ ‘ಇ-ಗೋಪಾಲ’ ಆ್ಯಪ್ ಬಳಕೆಗೆ ರೈತರ ನಿರಾಸಕ್ತಿ
ಮಂಗಳೂರು, ಜು.18:ಕೇಂದ್ರ ಸರಕಾರ ಬಿಡುಗಡೆಗೊಳಿಸಿದ್ದ ಹೊಸ ‘ಇ-ಗೋಪಾಲ’ ಆ್ಯಪ್ ಬಳಕೆಗೆ ದ.ಕ.ಜಿಲ್ಲೆಯ ರೈತರು ನಿರಾಸಕ್ತಿ ತೋರಿಸಿ ದ್ದಾರೆ. ಹತ್ತು ತಿಂಗಳ ಹಿಂದೆ ಈ ಆ್ಯಪ್ ಬಿಡುಗಡೆಗೊಂಡಿದ್ದರೂ ಕೂಡ ರೈತರು ಅದರ ಬಳಕೆಗೆ ಆಸಕ್ತಿಯನ್ನೇ ತೋರಿಲ್ಲ. ಬದಲಾಗಿ ಹಳೆಯ ರಾಜ್ಯ ಸರಕಾರದ ಸಹಾಯವಾಣಿಯನ್ನೇ ನೆಚ್ಚಿಕೊಂಡಿದ್ದಾರೆ.
ಜಾನುವಾರುಗಳ ಸಾಕಾಣಿಕೆ ಕುರಿತು ರೈತರಿಗೆ ತಕ್ಷಣ ಸಮಗ್ರ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ 2020ರ ಸೆಪ್ಟೆಂಬರ್‌ನಲ್ಲಿ ‘ಇ-ಗೋಪಾಲ’ ಆ್ಯಪ್ ಬಿಡುಗಡೆಗೊಳಿಸಿತ್ತು. ಆದರೆ ಈ ಆ್ಯಪ್ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಬಹುತೇಕ ರೈತರು ಡೌನ್ ಲೋಡ್ ಮಾಡಿಕೊಂಡಿಲ್ಲ ಎನ್ನಲಾಗಿದೆ.
ಈ ಆ್ಯಪ್ ಆಂಗ್ಲ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿ ಪಡೆಯುವ ಅವಕಾಶವೇ ಇಲ್ಲ. ಹಾಗಾಗಿ ರೈತರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿಲ್ಲ. ಅಷ್ಟೇ ಅಲ್ಲ, ದ.ಕ. ಜಿಲ್ಲೆಯಲ್ಲಿ ಎಷ್ಟು ಮಂದಿ ಈ ಆ್ಯಪ್ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆಯೂ ಅಧಿಕಾರಿಗಳಲ್ಲಿ ಖಚಿತ ಮಾಹಿತಿ ಇಲ್ಲ.
ಇ-ಗೋಪಾಲ
‘ಇ-ಗೋಪಾಲ’ ಆ್ಯಪ್‌ನಲ್ಲಿ ಜಾನುವಾರುಗಳ ಸಮಗ್ರ ತಳಿ, ಅವುಗಳ ಸುಧಾರಣೆ, ಮಾರುಕಟ್ಟೆಗಳ ತಾಣ ಮತ್ತು ಮಾಹಿತಿಯ ಪೋರ್ಟಲ್ ಒಳಗೊಂಡಿದೆ. 2020ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇದನ್ನು ಅನಾವರಣಗೊಳಿಸಿದ್ದರು. ಜಾನುವಾರು ಸಾಕಾಣೆ ಮಾಡುವ ರೈತರಿಗೆ ಪಶುಗಳ ಗುಣಮಟ್ಟದ ಸಂತಾನೋತ್ಪತ್ತಿ ಸೇವೆಗಳು (ಕೃತಕ ಗರ್ಭಧಾರಣೆ, ಪಶುವೈದ್ಯಕೀಯ ಪ್ರಥಮ ಚಿಕಿತ್ಸೆ, ಲಸಿಕೆ ಇತ್ಯಾದಿ), ಪೋಷಣೆಗೆ ಮಾರ್ಗದರ್ಶನ, ಸೂಕ್ತ ಆಯುರ್ವೇದ ಔಷಧ/ಎಥ್ನೋ ಪಶುವೈದ್ಯಕೀಯ ಔಷಧ ಬಳಸಿ ಪ್ರಾಣಿಗಳ ಚಿಕಿತ್ಸೆ ಇತ್ಯಾದಿ ಬಗ್ಗೆ ಮಾಹಿತಿಯನ್ನು ಆ್ಯಪ್ ಒದಗಿಸುತ್ತದೆ. ಅಷ್ಟೇ ಅಲ್ಲ ಲಸಿಕೆ, ಗರ್ಭಧಾರಣೆ, ರೋಗನಿರ್ಣಯ, ಕರುಗಳ ಜನನ ಇತ್ಯಾದಿಗೆ ಸಂಬಂಧಿಸಿ ನಿಗದಿತ ದಿನಾಂಕ ಮತ್ತು ವಿವಿಧ ಸರಕಾರಿ ಯೋಜನೆಯ ಬಗ್ಗೆಯೂ ಆ್ಯಪ್ ರೈತರಿಗೆ ಮಾಹಿತಿ ನೀಡುತ್ತದೆ. ಆದರೆ ಇದು ಇಂಗ್ಲಿಷ್ ಭಾಷೆಯಲ್ಲಿರುವ ಕಾರಣ ರೈತರು ಅತ್ತ ಗಮನವನ್ನೇ ಹರಿಸಿಲ್ಲ ಎಂದು ತಿಳಿದು ಬಂದಿದೆ.
‘ಸಹಾಯವಾಣಿ’ಗೆ ಒಲವು
ರಾಜ್ಯದಲ್ಲಿ ‘ಪಶುಪಾಲಕರ ಸಹಾಯವಾಣಿ’ಯ ಬಗ್ಗೆ ರೈತರು ಒಲವು ತೋರಿದ್ದಾರೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪ್ರಾಣಿ ರೋಗ ಕಣ್ಗಾವಲು ಜಾಲದ ಬಲವರ್ಧನೆ ಕಾರ್ಯಕ್ರಮದಡಿ ಮೊ.ಸಂ: 8277100200 (ಉಚಿತ) ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ದಿನದ 24 ಗಂಟೆಯೂ ಇದು ರೈತರಿಗೆ ಮಾಹಿತಿ ನೀಡುತ್ತದೆ. ಜಾನುವಾರು ರೋಗಗಳು, ಲಸಿಕಾ ಕಾರ್ಯಕ್ರಮ, ರೋಗ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳು, ತಳಿಗಳ ಮಾಹಿತಿ, ಮೇವಿನ ಬೆಳೆಗಳ ಮಾಹಿತಿ ಸಹಿತ ಸಮಗ್ರ ವಿವರವು ಸಹಾಯವಾಣಿಯಲ್ಲಿ ಲಭ್ಯವಿರುವ ಕಾರಣ ರೈತರು ‘ಇ-ಗೋಪಾಲ’ದ ಬದಲು ‘ಸಹಾಯವಾಣಿ’ಯನ್ನೇ ನೆಚ್ಚಿಕೊಂಡಿದ್ದಾರೆ.
*ರಾಸುಗಳಿಗೆ ಟ್ಯಾಗ್
ಆಧಾರ್ ಕಾರ್ಡ್ ಮಾದರಿಯಲ್ಲಿ ರಾಸುಗಳ ಕಿವಿಗೆ 12 ಅಂಕಿಗಳಿರುವ ಟ್ಯಾಗ್ ಹಾಕಿ ಅದರ ಸಂಪೂರ್ಣ ವಿವರವನ್ನು ಇನಾಫ್ (ಇನ್‌ಫಾರ್ಮೇಶನ್ ನೆಟ್‌ವರ್ಕ್ ಫಾರ್ ಅನಿಮಲ್ ಪ್ರೊಡಕ್ಟಿವಿಟಿ ಆ್ಯಂಡ್ ಹೆಲ್ತ್) ಪೋರ್ಟಲ್‌ನಲ್ಲಿ ಆಪ್ಲೋಡ್ ಮಾಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಈಗಾಲೇ ಶೇ.90ರಷ್ಟು ಜಾನುವಾರುಗಳಿಗೆ ಟ್ಯಾಗ್ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಾನುವಾರಿನ ವಯಸ್ಸು, ತಳಿ, ಮಾಲಕರ ಹೆಸರು, ಮೊಬೈಲ್ ಸಂಖ್ಯೆ, ಸರಕಾರದಿಂದ ಪಡೆದಿರುವ ಸೌಲಭ್ಯ, ವಿಮೆ ಇತ್ಯಾದಿಯಲ್ಲದೆ ಲಸಿಕೆ, ಗರ್ಭಧಾರಣೆ, ಕಾಲುಬಾಯಿ ಲಸಿಕೆ ಇತ್ಯಾದಿ ವಿವರವು ಟ್ಯಾಗ್ ಲಭ್ಯವಿದೆ.
‘ಇ-ಗೋಪಾಲ’ ಆ್ಯಪ್ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದರೂ ರೈತರು ಆ ಬಗ್ಗೆ ಹೆಚ್ಚು ಆಸಕ್ತಿ ವಹಿಸಿಲ್ಲ. ಅಲ್ಲದೆ ಬಹುತೇಕ ರೈತರು ರಾಜ್ಯದ ಸಹಾಯವಾಣಿ ಸಂಖ್ಯೆಯನ್ನೇ ಅವಲಂಬಿಸಿದ್ದಾರೆ. ಹೊಸ ಆ್ಯಪ್ ಬಗ್ಗೆ ರೈತರಲ್ಲಿ ಆಸಕ್ತಿ ಹುಟ್ಟಿಸಲು ಪ್ರಯತ್ನ ನಡೆಸಲಾಗುವುದು.
- ಡಾ. ಪ್ರಸನ್ನ ಕುಮಾರ್, ಉಪನಿರ್ದೇಶಕರು, ಪಶುಸಂಗೋಪನಾ ಇಲಾಖೆ, ದ.ಕ. ಜಿಲ್ಲೆ