ಅಪಹರಿಸಿ ದರೋಡೆ ಪ್ರಕರಣ : ಆರೋಪಿಗಳು ಬಳಸಿದ್ದ ಕಾರು ಪತ್ತೆ
ಉಡುಪಿ, ಜು.18: ಷೇರು ವ್ಯವಹಾರ ನಡೆಸುತ್ತಿದ್ದ ಅಶೋಕ್ ಕುಮಾರ್ ಎಂಬವರನ್ನು ಅಪಹರಿಸಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಬಳಸಿದ ಇನ್ನೋವಾ ಕಾರು ಇಂದು ಬೆಳಗಿನ ಜಾವ ಮಣಿಪಾಲದ ಮಣ್ಣಪಳ್ಳ ದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಶೇರು ಮಾರುಕಟ್ಟೆ ವ್ಯವಹಾರ ಮಾಡಿಕೊಂಡಿದ್ದ ಅಶೋಕ್ ಕುಮಾರ್ ಎಸ್. ಅವರನ್ನು ಜು.16ರಂದು ಸಂಜೆ ಸಂತೋಷ ಹಾಗೂ ಇತರ ನಾಲ್ಕು ಮಂದಿ ಕಾರಿನಲ್ಲಿ ಅಪಹರಿಸಿ ರೆಸಾರ್ಟ್ ನಲ್ಲಿ ಕೂಡಿ ಹಾಕಿ ಮಾರಕಾಸ್ತ್ರಗಳು ಹಾಗೂ ಪಿಸ್ತೂಲ್ ತೋರಿಸಿ ಬೆದರಿಸಿದರು. ಅಲ್ಲದೆ ಅಶೋಕ್ ಅವರಲ್ಲಿದ್ದ 2 ಲಕ್ಷ ರೂ. ಹಣ ಹಾಗೂ ಮೊಬೈಲ್‌ನ್ನು ದರೋಡೆ ಮಾಡಿದ್ದರು. ಜು.17ರಂದು ಉಡುಪಿಯ ಕೆನರಾ ಬ್ಯಾಂಕಿನಿಂದ ಬಲವಂತ ವಾಗಿ ಹಣವನ್ನು ಡ್ರಾ ಮಾಡಲು ಯತ್ನಿಸಿ ಪರಾರಿಯಾಗಿದ್ದನು.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದ ಪೊಲೀಸರಿಗೆ ಮಣ್ಣಪಳ್ಳದಲ್ಲಿ ಆರೋಪಿಗಳು ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರು ಪತ್ತೆಯಾಗಿದೆ. ಬ್ಯಾಂಕಿನಿಂದ ಪರಾರಿಯಾದ ತಂಡ ಬಳಿಕ ಕಾರನ್ನು ಬಿಟ್ಟು ತಲೆಮರೆಸಿಕೊಂಡಿದೆ ಎನ್ನಲಾಗಿದೆ. ಈ ಕಾರು ಸಾಸ್ತಾನ ಮೂಲದ ವ್ಯಕ್ತಿಯದ್ದು ಎಂದು ತಿಳಿದುಬಂದಿದೆ. ಆರೋಪಿಗಳಿಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.