ಕಾಶ್ಮೀರ: ಪತ್ರಕರ್ತನ ಮೇಲೆ ಪೊಲೀಸ್ ದೌರ್ಜನ್ಯ; ಆರೋಪ

Update: 2021-07-18 16:53 GMT

ಶ್ರೀನಗರ, ಜು.18: ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಸಂಗಮ್ ಚೆಕ್ ಪೋಸ್ಟ್ ನಲ್ಲಿ ತನ್ನ ಮೇಲೆ ಪೊಲೀಸರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವುದಾಗಿ ಪತ್ರಕರ್ತ ಆಕಾಶ್ ಹಸನ್ ಎಂಬವರು ಆರೋಪಿಸಿದ್ದಾರೆ. ಹಲ್ಲೆಯಿಂದ ತನ್ನ ಮುಖ ಹಾಗೂ ಕೈಗಳ ಮೇಲೆ ಗಾಯವಾಗಿರುವುದನ್ನು ಅವರು ಫೋಟೋ ಸಹಿತ ಟ್ವಿಟರ್ ಹ್ಯಾಂಡಲ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸ್ವತಂತ್ರ ಪತ್ರಕರ್ತನಾಗಿರುವ ಹಸನ್, ಅಂತರಾಷ್ಟ್ರೀಯ ಮಾಧ್ಯಮಗಳಿಗೆ ವರದಿ ಕಳುಹಿಸುತ್ತಿರುತ್ತಾರೆ. ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಂ ಉಂಟಾಗಿತ್ತು. ಆಗ ಓರ್ವ ಅಧಿಕಾರಿ ವ್ಯಾನ್ನ ಡ್ರೈವರ್ ಗೆ ಥಳಿಸಿದ್ದಾರೆ. ತಾನು ಆ ಸ್ಥಳಕ್ಕೆ ಕಾರಿನಲ್ಲಿ ಬಂದಾಗ ಅಧಿಕಾರಿ ಗುರುತು ಪತ್ರ ಕೇಳಿದ್ದು ಬಳಿಕ ನನ್ನ ಕಾಲರ್ ಹಿಡಿದು ಯಾವುದೇ ಕಾರಣವಿಲ್ಲದೆ ಮುಖದ ಮೇಲೆ ಹೊಡೆದಿದ್ದಾರೆ. ಬಳಿಕ ನನ್ನ ಕಾರಿನಲ್ಲಿದ್ದ ‘ಮಾಧ್ಯಮ’ದ ಲೇಬಲ್ ನೋಡಿ ‘ಮಾಧ್ಯಮದವರು’ ಎಂದು ಕಿರುಚಿ ನನ್ನನ್ನು ಕಾರಿನಿಂದ ಹೊರಗೆಳೆಯಲು ಯತ್ನಿಸಿದ್ದಾರೆ. 

ಆದರೆ ತಾನು ಅಲ್ಲಿಂದ ತಕ್ಷಣ ತೆರಳಿ, ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದು, ವಿಶೇಷ ವೈದ್ಯರಲ್ಲಿ ಚಿಕಿತ್ಸೆ ಪಡೆಯುವಂತೆ ಆಸ್ಪತ್ರೆಯವರು ಸಲಹೆ ನೀಡಿದ್ದಾರೆ ಎಂದು ಹಸನ್ ಹೇಳಿದ್ದಾರೆ.

ತನಗೆ ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸುವಂತೆ ಹಸನ್ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅನಂತ್ ನಾಗ್ ಜಿಲ್ಲಾ ಪೊಲೀಸರು, ಹಸನ್ ಹಾಗೂ ಅವರ ಗೆಳೆಯರು ಶೇರ್ ಮಾಡಿರುವ ಟ್ವೀಟ್ ಗಮನಿಸಲಾಗಿದೆ. ಸಂಜೆ ವೇಳೆ ಹೆದ್ದಾರಿಯಲ್ಲಿ ವಾಹನ ಸಂಚಾರದ ದಟ್ಟಣೆ ಇತ್ತು. ಆಗ ಒಂದು ವ್ಯಾನ್ ತಾಂತ್ರಿಕ ದೋಷದಿಂದ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದರಿಂದ ಟ್ರಾಫಿಕ್ ಜ್ಯಾಂ ಆಗಿದೆ. ಈ ಸಂದರ್ಭ ಪೊಲೀಸರು ಕರ್ತವ್ಯ ನಿರ್ವಹಣೆಗೆ ಸರ್ವರ ಸಹಕಾರ ಕೋರಿದ್ದರು ಎಂದಿದ್ದಾರೆ.
ಹಸನ್ ಮೇಲಿನ ಹಲ್ಲೆ ಪ್ರಕರಣವನ್ನು ಸ್ಥಳೀಯ ಪತ್ರಕರ್ತರು ಹಾಗೂ ರಾಜಕಾರಣಿಗಳು ತೀವ್ರವಾಗಿ ಖಂಡಿಸಿದ್ದಾರೆ. 

ಇಂತಹ ಘಟನೆಯನ್ನು ಸಹಿಸಲಾಗದು ಎಂದಿರುವ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಶ್ಮೀರದ ಐಜಿಪಿಯನ್ನು ಆಗ್ರಹಿಸಿದ್ದಾರೆ. ಕಾಶ್ಮೀರ ಪ್ರೆಸ್ ಕ್ಲಬ್ ಹಲ್ಲೆಯನ್ನು ಖಂಡಿಸಿದ್ದು ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹಿಸಿದೆ. ಕಾಶ್ಮೀರ ಪತ್ರಕರ್ತರ ಸಂಘಟನೆಯೂ ಖಂಡಿಸಿದ್ದು ಈ ಘಟನೆ ಕಾಶ್ಮೀರದಲ್ಲಿ ಉತ್ತರದಾಯಿತ್ವದ ಕೊರತೆ ಮತ್ತು ಈಗ ನೆಲೆಸಿರುವ ಪರಿಸ್ಥಿತಿಗೆ ಕೈಗನ್ನಡಿಯಾಗಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News