ಭಟ್ಕಳದಲ್ಲಿ ಭಾರೀ ಮಳೆ; ಉಕ್ಕಿ ಹರಿಯುತ್ತಿರುವ ಚೌತನಿ ಹೊಳೆ

Update: 2021-07-18 16:58 GMT

ಭಟ್ಕಳ: ತಾಲೂಕಿನಾದ್ಯಂತ ಕಳೆದ ಐದಾರು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯು ಹಲವು ಅವಾಂತರಗಳನ್ನು ಸೃಷ್ಟಿಸಿದ್ದು ಪುರಸಭೆ ವ್ಯಾಪ್ತಿಯಲ್ಲಿರುವ ಚೌತನಿ ಹೊಳೆ ತುಂಬಿ ಹರಿಯುತ್ತಿದ್ದು ಹೊಳೆ ನೀರು ಮನೆಗಳಿಗೆ ನುಗ್ಗಿದ್ದು ಸಂತೃಸ್ತರು ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾರೆ.

ಶನಿವಾರ ತಡರಾತ್ರಿಯಿಂದ ಮಳೆಯ ಅರ್ಭಟ ಜೋರಾಗಿದ್ದು ನಗರದ ವಿವಿಧ ಪ್ರದೇಶಗಳು ಜಲಾವೃತಗೊಂಡಿವೆ. ಹೆದ್ದಾರಿ 66 ರ ಅಸಮರ್ಪಕ ಕಾಮಾಗಾರಿಗಳಿಂದಾಗಿ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಇದ್ದುರಿಂದಾಗಿ ಹೆದ್ದಾರಿ ತುಂಬೆಲ್ಲ ಮಳೆನೀರು ನಿಂತಿದ್ದು ಇದರಿಂದಾಗಿ ವಾಹನಗಳ ಓಡಾಟಕ್ಕೆ ಅಡಚಣೆಯುಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ನಗರದ ಹೃದಯಭಾಗದಲ್ಲಿರುವ ಶಮ್ಸುದ್ದೀನ್ ವೃತ್ತವು ಜಲಾವೃತ್ತಗೊಂಡಿದ್ದು ಹೊಳೆಯ ಸ್ವರೂಪ ಪಡೆದುಕೊಂಡಿದೆ. ಹಲವುಕಡೆಗಳಲ್ಲಿ ಮನೆಗಳಿಗೆ ನುಗ್ಗಿದ ಮಳೆ ನೀರು ಜನರನ್ನು ಆತಂಕಿತರನ್ನಾಗಿಸಿದೆ. ಶಿರಾಲಿಯ ಹೆದ್ದಾರಿಯಲ್ಲಿ ಜನರು ನಿಂತ ನೀರಿನಲ್ಲಿ ಗಾಳವನ್ನು ಹಾಕಿ ಮೀನು ಹಿಡಿದು ಹೆದ್ದಾರಿಯ ಅಸಮರ್ಪಕ ಕಾಮಗಾರಿಯ ವಿರುದ್ಧ ವಿನೂತವಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಚೌತನಿಯ ಮನೆಗಳಿಗೆ ನುಗ್ಗಿದ ಹೊಳೆ ನೀರು; ಮನೆಗಳು ಖಾಲಿ: ಪುರಸಭೆ ವ್ಯಾಪ್ತಿಗೊಳಪಡುವ  ಚೌತನಿಯ ಹೊಳೆಯು ಉಕ್ಕಿ ಹರಿಯುತ್ತಿದ್ದು ತಟವಾಸಿಗಳ 7 ಮನೆಗಳು ಸಂಪೂರ್ಣ ಜಲಾವೃತ್ತಗೊಂಡಿದ್ದು ಕುದುರೆ ಬೀರಪ್ಪ ದೇವಸ್ಥಾನಕ್ಕೂ ನೀರು ನುಗ್ಗಿದೆ.

ಈ ಕುರಿತಂತೆ ವಾರ್ತಾಭಾರತಿಯೊಂದಿಗೆ ಮಾತನಾಡಿದ ಸಂತೃಸ್ತ ಕುಟುಂಬದ ಸದಸ್ಯ ಅಬ್ದುಲ್ ಹಮೀದ್ ಚಂಪಾ, ಇಂದು ಬೆಳಿಗ್ಗೆ ನೀರು ತುಂಬಲು ಪ್ರಾರಂಭಗೊಂಡಿದ್ದು ಇಲ್ಲಿ 7ಕುಟುಂಬಗಳು ವಾಸಿಸುತ್ತವೆ. ಅಪಾಯವನ್ನು ಅರಿತ ನಾವು ಬೆಳಿಗ್ಗೆಯೆ ನಮ್ಮ ಕುಟುಂಬದ ಎಲ್ಲ ಸದಸ್ಯರನ್ನು ಸುರಕ್ಷಿತವಾಗಿ ಬೇರೆಕಡೆ ಸ್ಥಳಾಂತರಿಸಿದ್ದೇವೆ. ಇಲ್ಲಿನ ಸಮಸ್ಯೆ ಸರ್ಕಾರಕ್ಕಾಗಲಿ, ಪುರಸಭೆಯವರಿಗಾಗಲಿ ಶಾಸಕರಿಗಾಗಲಿ ಅರ್ಥವಾಗುವುದಿಲ್ಲ. ನಮ್ಮಿಂದ ತೆರಿಗೆ ಪಡೆಯುವ ಪುರಸಭೆಯವರು ನಮ್ಮ ಸುರಕ್ಷತೆಗಾಗಿ ಯಾವುದೇ ಕ್ರಮಕೈಗೊಂಡಿಲ್ಲ. ಶಾಸಕ ಸುನಿಲ್ ನಾಯ್ಕರು ಇದೇ ಪ್ರದೇಶದಲ್ಲಿ ಹುಟ್ಟಿ ಬೆಳೆದವರು ಅವರಾದರೂ ನಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ಆಶಾಭಾವನೆಯಿಂದ ನಾವಿದ್ದೇವೆ. ನಮಗೆ ಶಾಶ್ವತವಾಗಿ ಪರಿಹಾರ ದೊರಕಿಸಿಕೊಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. ನಮಗೆ ಇಲ್ಲಿಂದ ತೆರವುಗೊಳಿಸಿ ಬೇರೆಕಡೆ ಎಲ್ಲಿಯಾದರೂ ಜಾಗ ನೀಡಿದ್ದಲ್ಲಿ ನಾವು ನೆಮ್ಮದಿಯಾಗಿ ವಾಸಿಸುತ್ತೇವೆ ಎಂದೂ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News