×
Ad

ಕೋವಿಡ್ ಹಿನ್ನೆಲೆ: ಹೊಸ ಪದ್ಧತಿಯಲ್ಲಿ ಎಸೆಸೆಲ್ಸಿ ಪರೀಕ್ಷೆ ಆರಂಭ

Update: 2021-07-19 09:37 IST

ಮಂಗಳೂರು, ಜು.19: ಕೊರೋನ ಆತಂಕದ ನಡುವೆ ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಭಯವಿಲ್ಲದೆ ಹೊಸ ಪದ್ಧತಿಯಲ್ಲಿ ಪರೀಕ್ಷೆ ಆರಂಭವಾಗಿದ್ದು, ದ.ಕ. ಜಿಲ್ಲೆಯಲ್ಲಿ 179 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.

ಇಂದು ಗಣಿತ, ಸಮಾಜ ಹಾಗೂ ವಿಜ್ಞಾನ ಪರೀಕ್ಷೆಯನ್ನು ಬರೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಪರೀಕ್ಷಾ ಕೇಂದ್ರಗಳತ್ತ ವಿದ್ಯಾರ್ಥಿಗಳು ಪೋಷಕರೊಂದಿಗೆ ಬರಲಾರಂಭಿಸಿದರು. ಪರೀಕ್ಷಾ ಕೇಂದ್ರದೊಳಗೆ ಸ್ಯಾನಿಟೈಸರ್ ಬಳಕೆ, ಸುರಕ್ಷಿತ ಅಂತರಕ್ಕೆ ಆದ್ಯತೆ ನೀಡಲಾಗಿದ್ದು, ವಿದ್ಯಾರ್ಥಿಗಳ ತಾಪಮಾನ ತಪಾಸಣೆಯನ್ನೂ ನಡೆಸಲಾಯಿತು.

ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಜತೆಗೆ ಹೆಚ್ಚುವರಿಯಾಗಿ ಪರೀಕ್ಷಾ ಕೇಂದ್ರಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿಯ ನೆರವನ್ನೂ ಪಡೆಯಲಾಗಿದೆ. ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಹೊಸ ಅನುಭವದ ಆತಂಕವಿದ್ದರೆ, ಪೋಷಕರಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಒಂದು ರೀತಿಯ ಗೊಂದಲ ಮುಂದುವರಿದಿದೆ.

ದ.ಕ. ಜಿಲ್ಲೆಯ 179 ಪರೀಕ್ಷಾ ಕೇಂದ್ರಗಳ 2718 ಪರೀಕ್ಷಾ ಕೊಠಡಿಗಳಲ್ಲಿ 32,657 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿ ಕೊಂಡಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ವಿಧಿಸಲಾಗಿದ್ದು, ಬೆಳಗ್ಗೆ ವಿದ್ಯಾರ್ಥಿಗಳೊಂದಿಗೆ ಆಗಮಿಸಿದ್ದ ಪೋಷಕರನ್ನು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಜಮಾವಣೆಗೊಳ್ಳದಂತೆ ಎಚ್ಚರಿಕೆ ವಹಿಸಲಾಗಿತ್ತು. 9.30ರ ವೇಳೆಗೆ ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಸೇರಿದ್ದು, 10.15ರಿಂದ ಪರೀಕ್ಷೆ ಪ್ರಕ್ರಿಯೆ ಆರಂಭಗೊಂಡಿತು. ಮಧ್ಯಾಹ್ನ 1.30ರವರೆಗೆ ಮೂರು ವಿಷಯಗಳ ಒಂದಂಕಿ ಪ್ರಶ್ನೋತ್ತರಗಳನ್ನು ಆಯ್ಕೆ ಮಾದರಿಯಲ್ಲಿ ವಿದ್ಯಾರ್ಥಿಗಳು ಬರೆಯಲಿದ್ದಾರೆ. ಇನ್ನುಳಿದ ಮೂರು ಭಾಷಾ ವಿಷಯದ ಪರೀಕ್ಷೆ ಜು. 22ರಂದು ನಡೆಯಲಿದೆ.

ಈ ವರ್ಷ ಬಹುತೇಕವಾಗಿ ಆನ್‌ಲೈನ್ ಮೂಲಕವೇ ತರಗತಿಗಳು ನಡೆದಿರುವುದರಿಂದ ಮೇ ಅಂತ್ಯದವರೆಗೂ ಪರೀಕ್ಷೆ ನಡೆಸುವ ಬಗ್ಗೆ ಗೊಂದಲದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಈ ಹೊಸ ಮಾದರಿಯ ಪರೀಕ್ಷೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಒಂದು ರೀತಿಯ ಗೊಂದಲ, ಆತಂಕಕ್ಕೆ ಕಾರಣವಾಗಿದೆ. ಹಾಗಿದ್ದರೂ ಪರೀಕ್ಷೆ ನಡೆಸುವ ಸರಕಾರದ ನಿರ್ಧಾರಕ್ಕೆ ಪೋಷಕರು ಹಾಗೂ ಸಾರ್ವಜನಿಕ ವಲಯದಿಂದ ಉತ್ತಮ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ಪರೀಕ್ಷೆ ವಿದ್ಯಾರ್ಥಿಗಳು, ಪೋಷಕರು ಮಾತ್ರವಲ್ಲ ಶಿಕ್ಷಕರಿಗೂ ಹೊಸತಾಗಿದ್ದು, ಈಗಾಗಲೇ ಅಣುಕು ಪರೀಕ್ಷೆಯ ಮೂಲಕ ತಯಾರಿ ನಡೆಸಲಾಗಿತ್ತು.

ಹೊಸ ಅನುಭವ: ಒಂದಷ್ಟು ಗೊಂದಲ

ಮಕ್ಕಳಿಗೆ ಆಫ್‌ಲೈನ್ ತರಗತಿಗಳು ಕಳೆದ ಜನವರಿಯಿಂದ ಮಾರ್ಚ್‌ವರೆಗೆ ನಡೆದಿತ್ತು. ಉಳಿದೆಲ್ಲವೂ ಆನ್‌ಲೈನ್ ಮೂಲಕವೇ ನಡೆದಿದೆ. ಈ ಹೊಸ ಪದ್ಧತಿಯ ಪರೀಕ್ಷೆ ಕುರಿತಂತೆ ಒಂದು ತಿಂಗಳ ಹಿಂದಷ್ಟೇ ನಿರ್ಧಾರ ಮಾಡಿರುವುದರಿಂದ ಮಕ್ಕಳಿಗೆ ಯಾವುದೆಲ್ಲಾ ಓದಬೇಕೆಂಬ ಗೊಂದಲ ಸೃಷ್ಟಿಯಾಗಿತ್ತು. ಒಟ್ಟಿನಲ್ಲಿ ಪರೀಕ್ಷೆ ನಡೆಯುತ್ತಿರುವುದು ಸಂತಸದ ವಿಷಯ ಎನ್ನುತ್ತಾರೆ ದೇರೆಬೈಲ್ ನಿವಾಸಿ, ನಗರದ ಸೈಂಟ್ ಆ್ಯಗ್ನೆಸ್ ಪರೀಕ್ಷಾ ಕೇಂದ್ರದಲ್ಲಿ ಇಂದು ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿನಿಯ ತಾಯಿ ಮಂಜುಳಾ.

ಅನುತ್ತೀರ್ಣದ ಭಯವಿಲ್ಲ

ಈ ಬಾರಿಯ ವಿಶೇಷತೆ ಎಂದರೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಭಯವಿಲ್ಲ. ಆದರೆ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಬಗ್ಗೆ ಗೊಂದಲ ವಾಗುವ ಸಾಧ್ಯತೆ ಇದೆ. ಈ ಬಾರಿ ಹೆಚ್ಚಾಗಿ ಆನ್‌ಲೈನ್‌ನಲ್ಲಿಯೇ ತರಗತಿ ನಡೆದಿರುವುದರಿಂದ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಪಾಠಗಳು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿಯೂ ತೊಂದರೆಯಾಗಿರುತ್ತದೆ. ಆದರೂ ಪರೀಕ್ಷೆಯನ್ನು ವಿದ್ಯಾರ್ಥಿಗಳು ಎದುರಿಸುತ್ತಿರುವುದು ಸಂತಸದ ವಿಚಾರ ಎಂದು ಎಸೆಸೆಲ್ಸಿ ವಿದ್ಯಾರ್ಥಿನಿಯೋರ್ವರ ಸಹೋದರಿ ಸುಷ್ಮಾ ಎಂಬವರು ಅಭಿಪ್ರಾಯಿಸಿದ್ದಾರೆ.

ಈ ಬಾರಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಭಯ ಸಾಕಷ್ಟು ಕಡಿಮೆಯಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮಗಳೊಂದಿ ವಿಶಾಲವಾದ ಕೊೂಠಡಿಯೊಂದರಲ್ಲಿ 12 ವಿದ್ಯಾರ್ಥಿಗಳಿಗಷ್ಟೇ ಪರೀಕ್ಷೆ ಬರೆಯಲು ಅವಕಾಶ ನೀಡುವ ಮೂಲಕ ಎಚ್ಚರಿಕೆ ವಹಿಸಿದೆ. ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ನಾವು ಪ್ರಸಕ್ತ ಸನ್ನಿವೇಶಕ್ಕೆ ಹೊಂದಿಕೊಂಡು ಸಾಗಬೇಕಾಗಿದೆ. ಎಸೆಸೆಲ್ಸಿ ಪರೀಕ್ಷೆ ನಡೆಸುವುದು ಅನಿವಾರ್ಯ ಎಂದು ಎಸೆಸೆಲ್ಸಿ ವಿದ್ಯಾರ್ಥಿಯ ಪೋಷಕರಾದ ಇಬ್ರಾಹಿಂ ಬೆಂಗ್ರೆ ಹೇಳಿದ್ದಾರೆ.

ಆನ್‌ಲೈನ್ ತರಗತಿಯಿಂದಾಗಿ ಮಕ್ಕಳು ಕಲಿಕೆಗಿಂತಲೂ ಹೆಚ್ಚಾಗಿ ಮೊಬೈಲ್‌ನಲ್ಲಿ ಆಟಕ್ಕೆ ಮರುಳಾಗಿರುವುದು ಸಹಜ. ಈ ಬಾರಿ ಎಲ್ಲರೂ ಉತ್ತೀರ್ಣರಾಗುತ್ತಾರೆಂಬ ಕಾರಣಕ್ಕೆ ಮಕ್ಕಳಿಗೆ ಹೆಚ್ಚಿನ ಒತ್ತಡವಿಲ್ಲ. ಆದರೆ ಹೆಚ್ಚು ಅಂಕ ಪಡೆದು ಭವಿಷ್ಯದ ಶಿಕ್ಷಣದ ಬಗ್ಗೆ ಕನಸು ಹೊತ್ತ ವಿದ್ಯಾರ್ಥಿ ಹಾಗೂ ಪೋಷಕರಿಗೆ ಕೊಂಚ ಗೊಂದಲ ಉಂಟಾಗಿದೆ. ಆದರೆ ಕೋವಿಡ್‌ನಂತಹ ಪರಿಸ್ಥಿತಿಯಲ್ಲೂ ಪರೀಕ್ಷೆ ನಡೆಸುತ್ತಿರುವ ತೀರ್ಮಾನ ಮಾತ್ರ ಸರಿಯಾಗಿದೆ ಎಂದು ಪೋಷಕರಾದ ರಂಜಿತ್ ಎಂಬವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News