×
Ad

ಬಂಗಾಳ ವಲಸಿಗ ಕುಟುಂಬದ ಬಾಲಕಿಗೆ ಕೇರಳದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ+ ಗ್ರೇಡ್

Update: 2021-07-19 11:25 IST
ರೋಕ್ಷತ್ ಖಾತೂನ್ (Photo: indianexpress.com)

ಕೊಝಿಕ್ಕೋಡ್: ಪಶ್ಚಿಮ ಬಂಗಾಳ ಮೂಲದ ವಲಸಿಗ ಕುಟುಂಬದ ಬಾಲಕಿಯೊಬ್ಬಳು ಈ ವರ್ಷದ ಕೇರಳದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ  ಮಲಯಾಳಂ ವಿಷಯ ಸಹಿತ ಎಲ್ಲಾ ವಿಷಯಗಳಲ್ಲಿ ಎ+ ಗ್ರೇಡ್ ಪಡೆದು ತೇರ್ಗಡೆಗೊಂಡು ಎಲ್ಲರಿಂದಲೂ ಪ್ರಶಂಸೆ ಗಿಟ್ಟಿಸಿದ್ದಾಳೆ.

ರೋಕ್ಷತ್ ಖಾತೂನ್ ಎಂಬ ಹೆಸರಿನ ಈ ಬಾಲಕಿಯ ಕುಟುಂಬದ ಮೂಲ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆ. ಕಳೆದ 12 ವರ್ಷಗಳಿಂದ ಆಕೆಯ ಕುಟುಂಬ ಕೊಝಿಕ್ಕೋಡ್‍ನಲ್ಲಿ ವಾಸವಾಗಿದೆ. ಉತ್ತಮ ಕೆಲಸಕ್ಕಾಗಿ ಕೇರಳಕ್ಕೆ ಆಕೆಯ ಕುಟುಂಬ ವಲಸೆ ಬಂದಿತ್ತು. ಆಕೆಯ ತಂದೆ ರೊಫಿಖ್ ಎಸ್ ಕೆ ಕೈಗಾರಿಕೆಯೊಂದರಲ್ಲಿ ಉದ್ಯೋಗದಲ್ಲಿದ್ದರೆ ತಾಯಿ ಝುಮಾ ಬೀಬಿ ಇತರರ ಮನೆಗಳಲ್ಲಿ ದುಡಿದು ಕುಟುಂಬ ನಿರ್ವಹಣೆಗೆ ಸಹಾಯ ಮಾಡುತ್ತಿದ್ದಾರೆ.

ಭಾಷೆಗಳ ಎಲ್ಲೆಯಲ್ಲಿ ಮೀರಿ ಖಾತೂನ್ ಮಾಡಿರುವ ಸಾಧನೆ ಎಲ್ಲರನ್ನು ನಿಬ್ಬೆರಗಾಗಿಸಿದೆ. ಆಕೆ ಒಂದನೇ ತರಗತಿ ಪಶ್ಚಿಮ ಬಂಗಾಳದಲ್ಲಿಯೇ ಕಲಿತಿದ್ದಳು. ನಂತರ ಕುಟುಂಬ ಕೇರಳಕ್ಕೆ ವಲಸೆ ಬಂದಿತ್ತು. "ಮೊದಲು ಮಲಯಾಳಂ ಕಲಿಯುವುದು ಕಷ್ಟವಾಗಿತ್ತು. ಆದರೆ ಸ್ನೇಹಿತರೊಂದಿಗೆ ಮಲಯಾಳಂ ಮಾತನಾಡಲು ಆರಂಭಿಸಿದ್ದು ಸಹಾಯವಾಯಿತು. ಮುಂದೆ  ಮಲಯಾಳಂ ಭಾಷೆಯನ್ನು ಕಲಿತೆ, ಶಿಕ್ಷಕರೂ  ಸಹಾಯ ಮಾಡಿದರು,'' ಎಂದು ಹೇಳುವ ಖಾತೂನ್, ಹಿಂದಿ ತನ್ನ ಮೆಚ್ಚಿನ ಭಾಷೆ ಎನ್ನುತ್ತಾಳೆ.

ಪ್ಲಸ್ ಟೂ ಪೂರೈಸಿರುವ ಆಕೆಯ ಸೋದರಿ ಕೂಡ ಎರಡು ವರ್ಷಗಳ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಂಬತ್ತು ಎ+ ಗ್ರೇಡ್‍ಗಳನ್ನು ಪಡೆದಿದ್ದಳು.

ತಮ್ಮ ಪುತ್ರಿಯ ಸಾಧನೆಯ ಹೆತ್ತವರಿಗೆ ಬಹಳ ಖುಷಿ ನೀಡಿದೆ.

ಕೃಪೆ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News