×
Ad

ಇಳಿಯಲಿದೆ ತೈಲಬೆಲೆ : ಕಾರಣ ಏನು ಗೊತ್ತೇ ?

Update: 2021-07-19 12:08 IST

ಹೊಸದಿಲ್ಲಿ: ಅಧಿಕ ತೈಲ ಉತ್ಪಾದನೆಗೆ 'ಒಪೆಕ್' ಪ್ಲಸ್ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ಗಗನಮುಖಿಯಾಗಿರುವ ತೈಲ ಬೆಲೆ ಶೀಘ್ರವೇ ಇಳಿಯುವ ಸಾಧ್ಯತೆಗಳಿವೆ. ಈ ಮಹತ್ವದ ನಿರ್ಧಾರದಿಂದ ಪೂರೈಕೆ ಕೊರತೆ ನೀಗಲಿದ್ದು, ತೈಲಬೆಲೆ ಏರಿಕೆಗೆ ಕಡಿವಾಣ ಬೀಳಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ದಿನಕ್ಕೆ 4 ಲಕ್ಷ ಬ್ಯಾರಲ್ ಹೆಚ್ಚುವರಿ ಕಚ್ಚಾತೈಲ ಉತ್ಪಾದನೆಗೆ ರಷ್ಯಾ ಹಾಗೂ 'ಒಪೆಕ್' ದೇಶಗಳು ನಿರ್ಧರಿಸಿದ್ದು, ಇದರಿಂದಾಗಿ ದೈನಿಕ ಉತ್ಪಾದನೆ 20 ಲಕ್ಷ ಬ್ಯಾರಲ್‌ಗೆ ಹೆಚ್ಚಲಿದೆ. ಈ ಹೆಚ್ಚಳ ಭಾರತದ ಅಗತ್ಯತೆಯ ಶೇಕಡ 44ರಷ್ಟಾಗಿದೆ. ಭಾರತಕ್ಕೆ ಪ್ರಮುಖ ತೈಲ ಸರಬರಾಜು ದೇಶಗಳಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್, ಇರಾಕ್ ಹಾಗೂ ಕುವೈತ್ ನ ತೈಲ ಉತ್ಪಾದನೆ ಕೋಟಾ ಹೆಚ್ಚಿರುವುದು ಕೂಡಾ ಭಾರತಕ್ಕೆ ಅನುಕೂಲಕರವಾಗಲಿದೆ.

ತನ್ನ ಉತ್ಪಾದನಾ ಕೋಟಾ ಹೆಚ್ಚಿಸುವಂತೆ ಯುಎಇ ಪಟ್ಟು ಹಿಡಿದಿದ್ದು, ಸೌದಿಅರೇಬಿಯಾ ಇದನ್ನು ವಿರೋಧಿಸಿದ್ದರಿಂದ ಸಮಸ್ಯೆಯಾಗಿತ್ತು. ಭಾರತ, ಚೀನಾ, ಅಮೆರಿಕ ಹಾಗೂ ಯೂರೋಪ್‌ನಲ್ಲಿ ಬೇಡಿಕೆ ಹೆಚ್ಚುತ್ತಿರುವ ನಡುವೆಯೇ ಪೂರೈಕೆ ಕೊರತೆ ಉಂಟಾಗುವ ಭೀತಿ ಎದುರಾಗಿತ್ತು.
ಭಾರತದ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಯುಎಇಯ ಅಹ್ಮದ್ ಅಲ್ ಜಬೇರ್ ಮತ್ತು ಸೌದಿಯ ಅಬ್ದುಲ್‌ ಅಝೀಝ್ ಬಿನ್ ಸಲ್ಮಾನ್ ಜತೆ ಮಾತುಕತೆ ನಡೆಸಿದ ಬೆನ್ನಲ್ಲೇ 'ಒಪೆಕ್' ಪ್ಲಸ್ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News