"ಅವರನ್ನು ಒಂದು ದಿನವೂ ಜೈಲಿನಲ್ಲಿರಿಸಲು ಸಾಧ್ಯವಿಲ್ಲ": ಮಣಿಪುರ ಹೋರಾಟಗಾರನ ತಕ್ಷಣ ಬಿಡುಗಡೆಗೆ ಸುಪ್ರೀಂಕೋರ್ಟ್ ಆದೇಶ

Update: 2021-07-19 07:37 GMT

ಹೊಸದಿಲ್ಲಿ: ಕೋವಿಡ್-19 ಚಿಕಿತ್ಸೆಗೆ ಸೆಗಣಿ ಹಾಗೂ ಗೋಮೂತ್ರ ಶಿಫಾರಸು ಮಾಡಿದ್ದ  ಬಿಜೆಪಿ ನಾಯಕನನ್ನು ಟೀಕಿಸಿ ಮಾಡಿದ ಫೇಸ್ ಬುಕ್ ಪೋಸ್ಟ್ ಗಾಗಿ ಬಂಧಿಸಲ್ಪಟ್ಟು ರಾಷ್ಟ್ರೀಯ ಭದ್ರತಾ ಕಾಯಿದೆ ಹೇರಲ್ಪಟ್ಟಿದ್ದ ಮಣಿಪುರದ ಸಾಮಾಜಿಕ ಹೊರಾಟಗಾರ ಎರೆಂಡ್ರೊ ಲೀಚೊಂಬಂ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶಿಸಿದೆ.

"ಅವರನ್ನು ಒಂದು ದಿನ ಕೂಡ ಜೈಲಿನಲ್ಲಿರಿಸಲು ಸಾಧ್ಯವಿಲ್ಲ, ಅವರ ಬಿಡುಗಡೆಗೆ ಇಂದು ಆದೇಶ ಹೊರಡಿಸುತ್ತೇವೆ" ಎಂದು ಜಸ್ಟಿಸ್ ಡಿ.ವೈ ಚಂದ್ರಚೂಡ್ ಹಾಗೂ ಜಸ್ಟಿಸ್ ಎಂ ಆರ್ ಶಾ ಅವರನ್ನೊಳಗೊಂಡ ಪೀಠ ಹೇಳಿದೆ.

ಸರಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಮ್ಮ ವಾದ ಮಂಡಿಸುತ್ತಾ ಪ್ರಕರಣದ ವಿಚಾರಣೆ ನಾಳೆಗೆ ನಿಗದಿ ಪಡಿಸಲು ಕೇಳಿಕೊಂಡರೂ ಅದಕ್ಕೊಪ್ಪದ ಪೀಠ ಇಂದೇ  ಬಿಡುಗಡೆಗೊಳಿಸಲು ನಿರ್ಧರಿಸಿತು.

"ಅವರನ್ನು ಬಂಧನದಲ್ಲಿರಿಸುವುದು ಸಂವಿಧಾನದ 21ನೇ ವಿಧಿಯನ್ವಯ ಜೀವಿಸುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗುತ್ತದೆ. ನ್ಯಾಯಾಲಯದ ಮಧ್ಯಂತರ ಆದೇಶದಂತೆ ಅವರು ರೂ. 1000 ವೈಯಕ್ತಿಕ ಬಾಂಡ್ ನೀಡಿದ ನಂತರ ತಕ್ಷಣ ಬಿಡುಗಡೆಗೊಳಿಸಬೇಕು" ಎಂದು ನ್ಯಾಯಾಲಯ ಆದೇಶಿಸಿದೆ. ಇಂದು ಸಂಜೆ 5 ಗಂಟೆಯೊಳಗಾಗಿ ಬಿಡುಗಡೆಗೊಳಿಸಬೇಕು ಎಂದೂ ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಹಾರ್ವರ್ಡ್ ವಿವಿಯಿಂದ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತ್ತಕೋತ್ತರ ಪದವಿ ಹೊಂದಿರುವ ಲೀಚೊಂಬಂ ಅವರು  ರಾಜ್ಯದಲ್ಲಿ ಸೈನಿಕರ ವಿಶೇಷಾಧಿಕಾರ ಕಾಯಿದೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ದೀರ್ಘ ಕಾಲ ಉಪವಾಸ ನಡೆಸಿದ್ದ ಶರ್ಮಿಳಾ ಅವರ ಸಹ ಹೋರಾಟಗಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News