ʼಪ್ರಧಾನಿ ಮೋದಿ ನಾಚಿಗೆಟ್ಟ ಮನುಷ್ಯʼ ಎಂದು ಟ್ವೀಟ್‌ ಮಾಡಿದ ಪತ್ರಕರ್ತನನ್ನು ವಜಾಗೊಳಿಸಿದ ಆಜ್‌ತಕ್‌ ಟಿವಿ

Update: 2021-07-19 08:21 GMT
Photo: Facebook

ಹೊಸದಿಲ್ಲಿ: ಆಜ್‌ ತಕ್‌ ಟಿವಿ ಚಾನೆಲ್‌ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತನನ್ನು ಪ್ರಧಾನಿ ಮೋದಿ ವಿರುದ್ಧ ಟ್ವೀಟ್‌ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಕೆಲಸದಿಂದ ವಜಾಗೊಳಿಸಿದ ಘಟನೆ ನಡೆದಿದೆ. ʼಪ್ರಧಾನಿ ನರೇಂದ್ರ ಮೋದಿ ಓರ್ವ ನಾಚಿಗೆಟ್ಟ ಮನುಷ್ಯʼ ಎಂದು ಟ್ವೀಟ್‌ ಮಾಡಿದ್ದಕ್ಕಾಗಿ ಇಂಡಿಯಾ ಟುಡೇ ಸಂಸ್ಥೆಯು ಪತ್ರಕರ್ತ ಶ್ಯಾಮ್‌ ಮೀರಾ ಸಿಂಗ್‌ ರನ್ನು ಕೆಲಸದಿಂದ ವಜಾಗೊಳಿಸಿದೆ. 

"ಪ್ರಧಾನ ಮಂತ್ರಿಯನ್ನು ಗೌರವಿಸಿ ಎಂದು ಹೇಳಿದವರು ಯಾರು? ಅವರು ಮೊದಲು ನರೇಂದ್ರ ಮೋದಿಗೆ ಪ್ರಧಾನಮಂತ್ರಿ ಸ್ಥಾನಕ್ಕೆ ಗೌರವ ಸಲ್ಲಿಸುವಂತೆ ಹೇಳಿ" ಎಂದು ಟ್ವೀಟ್‌ ಮಾಡಿದ್ದರು. ಇನ್ನೊಂದು ಟ್ವೀಟ್‌ ನಲ್ಲಿ " ನಾನು ಟ್ವಿಟರ್‌ ನಲ್ಲಿ ಏನಾದರೂ ಬರೆದಾಗ ಕೆಲ ಜನರು ನಾನು ಕೆಲಸ ಮಾಡುತ್ತಿರುವ ಸಂಸ್ಥೆಯನ್ನು ಟ್ಯಾಗ್‌ ಮಾಡುತ್ತಿದ್ದಾರೆ. ʼಆತನನ್ನು ಕೆಲಸದಿಂದ ವಜಾಗೊಳಿಸಿʼ ಎಂದು ಹೇಳುತ್ತಿದ್ದಾರೆ. ಆದರೆ ನಾನು ಮುಂದಿನ ಪೋಸ್ಟ್‌ ಗಳನ್ನು ನಿರ್ಭೀತಿಯಿಂದ ಬರೆಯುತ್ತೇನೆ. ಇದಕ್ಕಾಗಿ ನಾನು ನನ್ನ ಬರವಣಿಗೆ ನಿಲ್ಲಿಸಲಾರೆ. ಮೋದಿ ಓರ್ವ ನಾಚಿಗಟ್ಟ ಪ್ರಧಾನಿ" ಎಂದು ಅವರು ಬರೆದಿದ್ದರು.

"ಈ ಎರಡು ಟ್ವೀಟ್‌ ಗಳನ್ನು ಮಾಡಿದ್ದಕ್ಕಾಗಿ ನನ್ನನ್ನು ಕಂಪೆನಿಯು ಕೆಲಸದಿಂದ ವಜಾಗೊಳಿಸಿದೆ" ಎಂದು ಟ್ವಿಟರ್‌ ನಲ್ಲಿ ಅವರು ಮಾಹಿತಿ ನೀಡಿದ್ದಾರೆ. 

"ಜನರು ತಮ್ಮ ಡಿಗ್ರಿಗಳನ್ನು, ರಿಸರ್ಚ್‌ ಪೇಪರ್‌ ಗಳನ್ನು ತಮಗೆ ಆದರ್ಶಪ್ರಾಯರಾದವರಿಗೆ ಅರ್ಪಿಸುತ್ತಾರೆ. ಇಂಡಿಯಾ ಟುಡೇ ನೀಡಿರುವ ವಜಾ ಪತ್ರದ ಹೊರತು ನನಗೆ ತೋರಿಸಲು ಏನೂ ಇಲ್ಲ. ಆದ್ದರಿಂದ ಈ ಪತ್ರವನ್ನು ನಾನು ಅಫ್ಘಾನಿಸ್ತಾನದಲ್ಲಿ ಹುತಾತ್ಮನಾದ ನನ್ನ ಆತ್ಮೀಯ ಸ್ನೇಹಿತ ದಾನಿಶ್‌ ಸಿದ್ದೀಕಿಗೆ ಅರ್ಪಿಸುತ್ತಿದ್ದೇನೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ದಾನಿಶ್‌ ಸಿದ್ದೀಕಿ ಅಫ್ಘಾನಿಸ್ತಾನದಲ್ಲಿ ಮೃತರಾದ ಬಳಿಕ ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರ ಯಾವುದೇ ಸಂತಾಪ ಸೂಚನೆ ನಡೆಸಿಲ್ಲ ಮತ್ತು ಈ ಕುರಿತು ಚಕಾರವೆತ್ತಿಲ್ಲ ಎಂದು ಕೆಲ ಪೋಸ್ಟ್‌ ಗಳನ್ನು ಶ್ಯಾಮ್‌ ಮೀರಾ ಸಿಂಗ್‌ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News