"ಜನರು ಅಗ್ನಿ ಅವಘಡಗಳಲ್ಲಿ ಸಾಯುವುದು ಮುಂದುವರಿಯುತ್ತದೆ" ಗುಜರಾತ್ ಸರಕಾರದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ತರಾಟೆ

Update: 2021-07-19 11:48 GMT

ಹೊಸದಿಲ್ಲಿ: ಗುಜರಾತ್‍ನಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿ ಸಂಭವಿಸಿದ ಹಲವು ಅಗ್ನಿ ಅವಘಡಗಳಲ್ಲಿ ಹಲವಾರು ರೋಗಿಗಳು ಮೃತಪಟ್ಟ ಹೊರತಾಗಿಯೂ ಕೋವಿಡ್ ಆಸ್ಪತ್ರೆಗಳಲ್ಲಿ ಅಗ್ನಿಶಾಮಕ ನಿಯಮಗಳ ಕುರಿತಾದ ಆದೇಶವನ್ನು ವಾಪಸ್ ಪಡೆಯಲು ಗುಜರಾತ್ ಸರಕಾರ ಹೊರತಂದಿರುವ ಅಧಿಸೂಚನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಗುಜರಾತ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಅಧಿಸೂಚನೆಯು ಆಸ್ಪತ್ರೆಗಳಿಗೆ ಅಗ್ನಿ ಅವಘಡ ಸುರಕ್ಷಾ ವ್ಯವಸ್ಥೆಗಳನ್ನು ಅಳವಡಿಸಲು ಹೆಚ್ಚಿನ ಸಮಯ ನೀಡುವುದರಿಂದ ಅವುಗಳು ಕ್ರಮ ಕೈಗೊಳ್ಳುವ ತನಕ ರೋಗಿಗಳು ಸಾಯುತ್ತಲೇ ಇರುತ್ತಾರೆ ಎಂದು ನ್ಯಾಯಾಲಯ ಹೇಳಿತು.

"ಸರಕಾರವು ಅಕ್ರಮವನ್ನು ರಕ್ಷಿಸುತ್ತಿದೆ ಎಂಬ ಭಾವನೆಯನ್ನು ಈ ಅಧಿಸೂಚನೆ ನೀಡುತ್ತದೆ" ಎಂದು ನ್ಯಾಯಾಲಯ ಹೇಳಿದೆ.

"ನಮ್ಮಿಂದ ಒಮ್ಮೆ ಆದೇಶ ಹೊರಬಂದ ನಂತರ ಈ ರೀತಿಯ ಅಧಿಸೂಚನೆಯಿಂದ ನೀವು ಅದನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ. ನಿಮ್ಮ ಕ್ರಮದಿಂದ ಆಸ್ಪತ್ರೆಗಳು 2022ರ ತನಕ  ಆದೇಶವನ್ನು ಪಾಲಿಸಬೇಕಿಲ್ಲ ಹಾಗೂ ಜನರು ಬೆಂಕಿಯಲ್ಲಿ ಸುಟ್ಟು ಸಾಯುತ್ತಲೇ ಇರುತ್ತಾರೆ" ಎಂದು ಜಸ್ಟಿಸ್ ಡಿ ವೈ ಚಂದ್ರಚೂಡ್ ಹೇಳಿದರು.

"ಅಧಿಸೂಚನೆ ಏಕೆ ಹೊರಡಿಸಲಾಗಿದೆ ಎಂಬ ಕಾರಣ ನೀಡಬೇಕು  ಮತ್ತು ಸುಪ್ರೀಂ ಕೋರ್ಟಿನ ಡಿಸೆಂಬರ್ 2020ರ ಆದೇಶದಂತೆ ನಡೆಸಲಾದ ಅಗ್ನಿಶಾಮಕ ಸುರಕ್ಷತಾ ಆಡಿಟ್ ಕುರಿತಂತೆ ಕೈಗೊಂಡ ಕ್ರಮಗಳ ಕುರಿತು ವರದಿಯನ್ನೂ ಸಲ್ಲಿಸಬೇಕು" ಎಂದು ನ್ಯಾಯಾಲಯ ಗುಜರಾತ್ ಸರಕಾರಕ್ಕೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News