×
Ad

200 ಮಿಲಿಯನ್‌ ಡಾಲರ್‌ ಮೊತ್ತದ ಹವಾಮಾನ ತಂತ್ರಜ್ಞಾನ ವಿಸಿ ಫಂಡ್‌ ಸ್ಥಾಪಿಸಲಿರುವ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ

Update: 2021-07-19 16:41 IST
Photo: Bangalore mirror

ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ನಾಯಕ, ಕರ್ನಾಟಕದ ಮಾಜಿ ಸೀಎಂ ಹಾಗೂ ಮಾಜಿ ಕೇಂದ್ರ ಸಚಿವ ಎಂ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ 200 ಮಿಲಿಯನ್ ಡಾಲರ್ (ಸುಮಾರು 1500 ಕೋಟಿ ರೂ. ) ಮೊತ್ತದ ಕ್ಲೈಮೇಟ್ ಟೆಕ್ (ಹವಾಮಾನ ತಂತ್ರಜ್ಞಾನ) ಸಂಬಂಧಿತ ವೆಂಚರ್ ಕ್ಯಾಪಿಟಲ್ ( ದೀರ್ಘಕಾಲದಲ್ಲಿ ಚೆನ್ನಾಗಿ ಬೆಳೆಯುವ ಹಾಗು  ಲಾಭದಾಯಕವಾಗುವ ಸಾಧ್ಯತೆಯುಳ್ಳ ಸ್ಟಾರ್ಟ್ ಅಪ್ ಹಾಗು ಸಣ್ಣ ಉದ್ಯಮಗಳಲ್ಲಿ ಹೂಡಿಕೆ ಮಾಡುವ ವ್ಯವಸ್ಥೆ) ನಿಧಿಯನ್ನು ಸ್ಥಾಪಿಸಲಿದ್ದಾರೆ.

 ಹವಾಮಾನ ಬದಲಾವಣೆಗಳಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವುದು ತಮ್ಮ ಏಕೈಕ ಉದ್ದೇಶ ಎಂದು ಅಮೆರಿಕಾದಲ್ಲಿ ಶಿಕ್ಷಣ ಪಡೆದಿರುವ ಹಾಗೂ ಮ್ಯಾನೇಜ್ಮೆಂಟ್ ತಜ್ಞರಾಗಿರುವ ಹರ್ಷ ಹೇಳಿದ್ದಾರೆ. ರಾಜಕೀಯ ತಮಗೀಗ ಮುಗಿದ ಅಧ್ಯಾಯವೆಂದೂ ಅವರು ಹೇಳಿಕೊಂಡಿದ್ದಾರೆ.

"ನಾನು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವನು. ನಾವು ಚಿರಖಣಿಯಾಗಿರುವ ಜನರಿಗೆ ಏನಾದರೂ ಮಾಡಬೇಕೆಂಬ ಒಂದು ಬದ್ಧತೆ ನಮಗಿದೆ ಎಂಬ ಭಾವನೆಯಿದೆ. ರಾಜಕಾರಣದಲ್ಲಿ ಕೈಯ್ಯಾಡಿಸಿದೆ ಆದರೆ ಕೆಲ ವರ್ಷಗಳ ನಂತರ, ನಾನು ರಾಜಕಾರಣಕ್ಕೆ ಹೇಳಿ ಮಾಡಿಸಿದವನಲ್ಲ ಎಂದು ತಿಳಿದು ಬಂತು" ಎಂದು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ಅವರು ಹೇಳಿದರು.

ಅವರ ಕ್ಲೈಮೇಟ್‍ಟೆಕ್ ವಿಸಿ ಫಂಡ್  ಹಸಿರು ಕಟ್ಟಡಗಳು, ಇಂಧನ ಶೇಖರಣೆ, ಸುಸ್ಥಿರ ಕೃಷಿ ಮತ್ತು ಹಸಿರು ಹೈಡ್ರೋಜನ್ ಮತ್ತು ಅಣು ವಿದ್ಯುತ್ ನಂತಹ ಪರ್ಯಾಯ ಇಂಧನದ ಕ್ಷೇತ್ರಗಳಿಗೆ ಹೆಚ್ಚಿನ  ಒತ್ತು ನೀಡಲಿದೆ.

ಜತೆಗೆ ತಮ್ಮ ವಿಸಿ ಫಂಡ್, ಭಾರತ ಮತ್ತು ಇಸ್ರೇಲ್‍ನಲ್ಲಿನ ಉದ್ಯಮಿಗಳಿಗೆ ಇಂಗಾಲದ ಡೈಆಕ್ಸೈಡ್ ಮತ್ತು ಮಿಥೇನ್ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ಉತ್ಪನ್ನಗಳು ಹಾಗೂ ಸೇವೆಗಳ ಅಭಿವೃದ್ಧಿಗೆ ಸಹಾಯ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಪ್ರಯಾಣ ನಿರ್ಬಂಧಗಳು ಅಂತ್ಯಗೊಂಡ ನಂತರ ಅಮೆರಿಕಾಗೆ ತೆರಳಿ ತಮ್ಮ ಹೊಸ ಪ್ರಯತ್ನಕ್ಕೆ  ಹಣ ಸಂಗ್ರಹಿಸುವುದಾಗಿಯೂ ಅವರು ತಿಳಿಸಿದ್ದಾರೆ.

ಹರ್ಷ ಮೊಯ್ಲಿ ಅವರು ಈ ಹಿಂದೆ ಕರ್ನಾಟಕದಲ್ಲಿ ಮಿಲ್ಕ್ ರೂಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರೂ 2015ರಲ್ಲಿ ಅದರಿಂದ ನಿರ್ಗಮಿಸಿ ಮುಂದೆ 2017ರಲ್ಲಿ ಡಿಜಿಟಲ್ ಮಾಧ್ಯಮ ಸ್ಥಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News