×
Ad

​ಉಡುಪಿ: ತಗ್ಗಿದ ಮಳೆ ಪ್ರಮಾಣ; ಇಳಿದ ನೆರೆ

Update: 2021-07-19 19:18 IST

ಉಡುಪಿ, ಜು.19: ಎರಡು ದಿನಗಳ ಸತತ ಬಿರುಸಿನ ಮಳೆಯ ನಂತರ ಇಂದು ಮಳೆಯ ಪ್ರಮಾಣ ಸಾಕಷ್ಟು ತಗ್ಗಿದೆ. ಧಾರಾಕಾರ ಮಳೆಯಿಂದ ನೀರು ತುಂಬಿದ್ದ ತಗ್ಗು ಪ್ರದೇಶಗಳ ನೆರೆಯ ನೀರೆಲ್ಲಾ ಇಳಿದುಹೋಗಿದೆ. ಇದರಿಂದ ಜಿಲ್ಲೆಯ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ.
ಇಂದು ಮಳೆ ಬಿರುಸು ಕಡಿಮೆಯಾಗಿದ್ದು ಮಾತ್ರವಲ್ಲ, ಒಂದೆರಡು ಗಂಟೆಗಳ ಕಾಲ ಸೂರ್ಯನ ದರ್ಶನವೂ ಆಗಿದೆ. ನೀರು ಹರಿದುಹೋಗಲು ಸರಿಯಾದ ಜಾಗವಿಲ್ಲದೇ ಕೃತಕ ನೆರೆ ಕಾಣಿಸಿಕೊಂಡ, ನದಿಗಳೆಲ್ಲಾ ತುಂಬಿ ಹರಿದು ಪ್ರವಾಹ ಕಂಡುಬಂದ ತಗ್ಗುಪ್ರದೇಶಗಳ ನೀರೆಲ್ಲವೂ ಇಂದು ಇಳಿದುಹೋಗಿವೆ. ಆದರೆ ಅಪರಾಹ್ನದ ಬಳಿಕ ಮಳೆ ಆಗಾಗ ಬಿರುಸಾಗಿ ಸುರಿಯುತ್ತಿದೆ.

ಭತ್ತದ ಬೆಳೆಗೆ ಹಾನಿ: ಸತತ ಮಳೆಯಿಂದ ಹೆಬ್ರಿ ತಾಲೂಕು ಕುಚ್ಚೂರು ಗ್ರಾಮದ ಸತೀಶ್ ಶೆಟ್ಟಿ ಜಾರಮಕ್ಕಿ ಅವರ ಭತ್ತದ ಗದ್ದೆಯಲ್ಲಿ ನೆರೆ ಬಂದು ಭತ್ತದ ಬೆಳೆ ಭಾಗಶ: ಹಾನಿಗೊಂಡಿರುವುದಾಗಿ ತಿಳಿದುಬಂದಿದೆ. ಅದೇ ರೀತಿ ಕುಂದಾಪುರ ತಾಲೂಕು ಆಲೂರು ಗ್ರಾಮದ ಸುಜಾತ ಶೆಟ್ಟಿ ತೋಟಗಾರಿಕಾ ಬೆಳೆಗೂ ಹಾನಿಯಾಗಿರುವ ವರದಿ ಬಂದಿದೆ.

ಗಾಳಿ-ಮಳೆಯಿಂದ ಉಡುಪಿ ತಾಲೂಕು ಹಿರೇಬೆಟ್ಟು ಗ್ರಾಮದ ಗೋವಿಂದ ಆಚಾರ್ಯ ಎಂಬವರ ವಾಸ್ತವ್ಯದ ಪಕ್ಕಾ ಮನೆಯ ಗೋಡೆ ಭಾರೀ ಮಳೆಗೆ ಕುಸಿದಿದ್ದು, ಸುಮಾರು ಎರಡು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ. ಅದೇ ರೀತಿ ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ಬಸವ ನಾಯ್ಕರ ಮನೆಗೆ 60,000 ರೂ. ಹಾಗೂ ಉಪ್ಪೂರು ಗ್ರಾಮದ ಕಾಳು ಸೇರ್ವೆಗಾರ್ ಇವರ ಮನೆಗೆ 95,000ರೂ. ನಷ್ಟದ ಅಂದಾಜು ಮಾಡಲಾಗಿದೆ.

ಕುಂದಾಪುರ ತಾಲೂಕು ವಡೇರಹೋಬಳಿಯ ಲಕ್ಷ್ಮೀ ಎಂಬವರ ಮನೆಯೂ ಮಳೆಯಿಂದ ಭಾಗಶ: ಹಾನಿಗೊಂಡಿದ್ದು, 30,000ರೂ.ನಷ್ಟದ ಅಂದಾಜು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News