​ಸಿಎಂ ಬದಲಾವಣೆ ಕುರಿತ ವೈರಲ್ ಆಡಿಯೋಗೂ ನನಗೂ ಸಂಬಂಧವಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಸ್ಪಷ್ಟನೆ

Update: 2021-07-19 16:40 GMT

ಮಂಗಳೂರು, ಜು.19: ಮುಖ್ಯಮಂತ್ರಿ ಬದಲಾವಣೆ, ಸಚಿವರನ್ನು ಕೈಬಿಡುವ ಕುರಿತು ವೈರಲ್ ಆದ ಆಡಿಯೋಗೂ ನನಗೂ ಸಂಬಂಧವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಸ್ಪಷ್ಪಪಡಿಸಿದ್ದಾರೆ.

ಮಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ. ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.

ಪ್ರಕರಣದ ಬಗ್ಗೆ ಪೂರ್ಣ ತನಿಖೆ ಆಗಬೇಕೆಂದು ಆಗ್ರಹಿಸುತ್ತೇನೆ. ತನಿಖೆಯಿಂದ ಆಡಿಯೋದ ಸತ್ಯಾಸತ್ಯತೆ ಹೊರಬರಬೇಕು. ಈ ರೀತಿಯ ಪ್ರಕರಣಗಳು ಹಿಂದೆ ಹತ್ತಾರು ಆಗಿವೆ. ಇದು ಸರಿಯಲ್ಲ. ಹಾಗಾಗಿ ತನಿಖೆಗೆ ಆಗ್ರಹಿಸಿದ್ದೇನೆ ಎಂದರು.

ಪಕ್ಷಕ್ಕೆ ಯಡಿಯೂರಪ್ಪ ಆತ್ಮ ಇದ್ದಂತೆ. ಅವರು ಹೋರಾಟದಿಂದ ಮೇಲೆ ಬಂದಿದ್ದಾರೆ. ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಪಕ್ಷದ ಎರಡು ಕಣ್ಣುಗಳಿದ್ದಂತೆ. ಅವರೆಲ್ಲರ ಮಾರ್ಗದರ್ಶನದಲ್ಲಿ ಪಕ್ಷ, ಸರಕಾರ ನಡೆಯುತ್ತದೆ. ನಮ್ಮಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳೇ ಇಲ್ಲ. ಹಾಗಾಗಿ ಸಚಿವರನ್ನು ಕೈಬಿಡಲಾಗುವುದು ಎಂಬ ವಿಷಯವೇ ಅಪ್ರಸ್ತುತ. ಇಂತಹ ಯಾವುದೇ ಮಾತುಕತೆಗಳು ಪಕ್ಷದಲ್ಲಿ ಚರ್ಚೆ ಆಗಿಲ್ಲ. ನಮ್ಮೊಳಗೂ ಚರ್ಚೆ ಆಗಿಲ್ಲ. ತನಿಖೆ ಆಗದೇ ನಾನು ಯಾರ ಬಗ್ಗೆಯೂ ಸಂಶಯ ಪಡುವುದಿಲ್ಲ. ನ್ಯಾಯಾಲಯದ ಮೊರೆ ಹೋಗುವ ಬಗ್ಗೆಯೂ ಚಿಂತನೆ ನಡೆಸಿದ್ದೇನೆ ಎಂದವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News