ಅಲ್ ಅಖ್ಸಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರನ್ನು ಅಶ್ರುವಾಯು ಸಿಡಿಸಿ ಚದುರಿಸಿದ ಇಸ್ರೇಲ್ ಪೊಲೀಸರು
ಜೆರುಸಲೇಂ, ಜು.19: ಜೆರುಸಲೇಂನ ಅಲ್-ಅಖ್ಸಾ ಮಸೀದಿಗೆ ರವಿವಾರ ಭೇಟಿ ನೀಡಲು ಆಗಮಿಸಿದ ಯೆಹೂದಿ ಯಾತ್ರಿಗಳಿಗೆ ಅನುಕೂಲ ಮಾಡಿಕೊಡಲು ಮುಂದಾದ ಇಸ್ರೇಲ್ ಪೊಲೀಸರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರನ್ನು ಚದುರಿಸಲು ಅಶ್ರುವಾಯು ಮತ್ತು ರಬ್ಬರ್ ಲೇಪಿತ ಬುಲೆಟ್ ಗಳನ್ನು ಬಳಸಿದ್ದಾರೆ ಎಂದು ಸುದ್ಧಿಸಂಸ್ಥೆ ವರದಿ ಮಾಡಿದೆ. ಇಸ್ರೇಲ್ ಆಕ್ರಮಿತ ಪೂರ್ವ ಜೆರುಸಲೇಂನಲ್ಲಿರುವ ಈ ಮಸೀದಿ ಮುಸ್ಲಿಮರಿಗೆ ಮೂರನೇ ಅತ್ಯಂತ ಪವಿತ್ರಸ್ಥಳವಾಗಿದೆ. ಯೆಹೂದಿಗಳು ಇದನ್ನು ಟೆಂಪಲ್ ಮೌಂಟ್ ಎಂದು ಕರೆಯುತ್ತಾರೆ. ಮಸೀದಿಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದವರನ್ನು ಚದುರಿಸಿದ ಪೊಲೀಸರ ಕ್ರಮವನ್ನು ಪೆಲೆಸ್ತೀನಿಯರು ಖಂಡಿಸಿದ್ದಾರೆ.
ಮಸೀದಿಯತ್ತ ಬರುತ್ತಿದ್ದ ಯಾತ್ರಿಗಳತ್ತ ಹಾಗೂ ಅಲ್ಲಿದ್ದ ಪೊಲೀಸ್ ಪಡೆಯತ್ತ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಸೇರಿದ್ದ ಪೆಲೆಸ್ತೀನ್ ಯುವಕರು ಕಲ್ಲುತೂರಾಟ ನಡೆಸಿದ್ದರಿಂದ ಅವರನ್ನು ಚದುರಿಸಲಾಗಿದೆ. ಯೆಹೂದಿಗಳ ಹಬ್ಬ ಟಿಷಾ ಬಾ’ವ್ನ ಅಂಗವಾಗಿ ಇಲ್ಲಿಗೆ ಯೆಹೂದಿಗಳು ಭೇಟಿ ನೀಡಲು ಆಗಮಿಸಿದ್ದರು ಎಂದು ಇಸ್ರೇಲ್ ಪೊಲೀಸರು ಹೇಳಿದ್ದಾರೆ.
ಈ ಪ್ರದೇಶಕ್ಕೆ ಯೆಹೂದಿಗಳಿಗೆ ಭೇಟಿಗೆ ಅವಕಾಶ ನೀಡಿರುವುದನ್ನು ಇಸ್ರೇಲ್ ನ ಬಲಪಂಥೀಯ ಪ್ರಧಾನಿ ನಫ್ತಾಲಿ ಬೆನ್ನೆಟ್ ಸಮರ್ಥಿಸಿಕೊಂಡಿದ್ದಾರೆ. ಗಾಯವಾದ ಬಗ್ಗೆ ಅಥವಾ ಬಂಧನದ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ ಎಂದು ಮಾಧ್ಯಮಗಳು ಹೇಳಿವೆ. ಸ್ಥಳದಲ್ಲಿ ಯಾವುದೇ ಉದ್ವಿಗ್ನತೆ ಉಂಟು ಮಾಡುವ ಮತ್ತು ಪ್ರಚೋದನಾತ್ಮಕ ಕೃತ್ಯ ನಡೆಯಬಾರದು ಎಂದು ಪೆಲೆಸ್ತೀನ್ ಗೆ ವಿಶ್ವಸಂಸ್ಥೆಯ ನಿಯೋಗ ಕರೆ ನೀಡಿದ್ದು, ಯಥಾಸ್ಥಿತಿ ಕಾಯ್ದುೊಳ್ಳುವಂತೆ ಇಸ್ರೇಲ್ ಗೆ ಆಗ್ರಹಿಸಿದೆ.