ಹಂತಹಂತವಾಗಿ ತುಳು, ಬ್ಯಾರಿ, ಕೊಂಕಣಿ ಭವನ ನಿರ್ಮಾಣ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2021-07-19 17:08 GMT

ಮಂಗಳೂರು, ಜು.19: ತುಳು, ಬ್ಯಾರಿ, ಕೊಂಕಣಿ ಸಾಂಸ್ಕೃತಿಕ ಭವನಗಳನ್ನು ಹಂತಹಂತವಾಗಿ ನಿರ್ಮಾಣ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತುಳು, ಬ್ಯಾರಿ, ಕೊಂಕಣಿ ಅಕಾಡಮಿ ಅಧ್ಯಕ್ಷರೊಂದಿಗೆ ಭವನಗಳ ನಿರ್ಮಾಣ ಕುರಿತಂತೆ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ರಂಗಮಂದಿರ ಜೊತೆಗೆ ತುಳು, ಬ್ಯಾರಿ ಹಾಗೂ ಕೊಂಕಣಿ ಸಾಂಸ್ಕೃತಿಕ ಭವನದ ನಿರ್ಮಾಣಕ್ಕೆ ಸರಕಾರದಿಂದ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಆಯಾ ಅಕಾಡಮಿ ಭವನಗಳ ನಿರ್ಮಾಣಕ್ಕೆ ಸಂಬಂಧಿಸಿದವರು ಒಪ್ಪಿಗೆ ನೀಡಿದ್ದಾರೆ ಎಂದರು.

ಜಿಲ್ಲಾ ರಂಗಮಂದಿರಕ್ಕೆ ಮೊದಲ ಹಂತದಲ್ಲಿ ಐದು ಕೋಟಿ, ತುಳು ಭವನದ ನಿರ್ಮಾಣಕ್ಕೆ ಎರಡನೇ ಹಂತದಲ್ಲಿ 3.5 ಕೋಟಿ, ಕೊಂಕಣಿ ಮತ್ತು ತುಳು ಅಕಾಡಮಿಯ ಭವನಕ್ಕಾಗಿ ಮೊದಲ ಹಂತದಲ್ಲಿ ತಲಾ ಮೂರು ಕೋಟಿ ರೂ.ನ್ನು ಸರಕಾರ ಬಿಡುಗಡೆ ಮಾಡಿದೆ ಎಂದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಗೂ ಶಾಸಕ ಡಾ. ಭರತ್ ಶೆಟ್ಟಿ ವೇದಿಕೆಯಲ್ಲಿದ್ದರು. ಉಪವಿಭಾಗಾಧಿಕಾರಿ ಮದನ್ ಮೋಹನ್, ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಬ್ಯಾರಿ ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ, ಕೊಂಕಣಿ ಅಕಾಡಮಿ ಅಧ್ಯಕ್ಷ ಡಾ. ಜಗದೀಶ್ ರೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ತಹಶೀಲ್ದಾರ್‌ರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News