ಮೂರನೇ ಎರಡರಷ್ಟು ಭಾರತೀಯರಲ್ಲಿ ಕೋವಿಡ್ ವಿರುದ್ಧ ಪ್ರತಿಕಾಯ: ಸಮೀಕ್ಷೆ

Update: 2021-07-21 04:15 GMT

ಹೊಸದಿಲ್ಲಿ: ದೇಶದ 67.6% ಜನರು ಸಾರ್ಸ್-ಕೋವ್2 ವೈರಸ್ ವಿರುದ್ಧದ ಪ್ರತಿಕಾಯ ವ್ಯವಸ್ಥೆ ಹೊಂದಿದ್ದು, ಮೂರನೇ ಒಂದರಷ್ಟು ಜನರು ಇನ್ನೂ ಕೋವಿಡ್-19 ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ ಎನ್ನುವುದು ನಾಲ್ಕನೇ ರಾಷ್ಟ್ರೀಯ ಸೆರೊ ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಆದರೆ ದೇಶದ ಹಲವು ಭಾಗಗಳಲ್ಲಿ ಇನ್ನೂ ಧನಾತ್ಮಕತೆ ದರ ಅಧಿಕವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಈ ಅಂಶವನ್ನು ಅಂದಾಜಿಸುವಂತಿಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಂತೆಯೇ ಪ್ರತಿಕಾಯ ಹೊಂದಿರುವ ಜನರ ಹಂಚಿಕೆ ಸಮ ಪ್ರಮಾಣದಲ್ಲಿ ಇಲ್ಲ ಎನ್ನುವುದು ಸಮೀಕ್ಷೆಯಿಂದ ದೃಢಪಟ್ಟಿದೆ.

"ಈ ಸಮೀಕ್ಷಾ ಅಂಶಗಳು ಆಶಾಕಿರಣವನ್ನು ಮೂಡಿಸಿವೆ. ಆದರೆ ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳುವಂತಿಲ್ಲ. ಕೋವಿಡ್ ಸೂಕ್ತವಾದ ನಡವಳಿಕೆ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆ ಮುಂದುವರಿಸಬೇಕು" ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ಬಲರಾಂ ಭಾರ್ಗವ ಹೇಳಿದ್ದಾರೆ.

ಕುತೂಹಲಕಾರಿ ಅಂಶವೆಂದರೆ ಹೆಚ್ಚಾಗಿ ಸಂಚಾರದಲ್ಲಿರುವ 18-44 ವರ್ಷದವರಿಗಿಂತ ಹೆಚ್ಚಾಗಿ 45-60 ವರ್ಷ ವಯಸ್ಸಿನವರಲ್ಲಿ ಗರಿಷ್ಠ ಸೆರೊ ಧನಾತ್ಮಕತೆ ದರ (77.6%) ಕಂಡುಬಂದಿದೆ. ಇತರ ವಯೋವರ್ಗಕ್ಕೆ ಹೋಲಿಸಿದರೆ ಮಕ್ಕಳು ಕೋವಿಡ್‍ಗೆ ತೆರೆದುಕೊಳ್ಳುವ ಸಾಧ್ಯತೆ ಕನಿಷ್ಠ. ಆದಾಗ್ಯೂ 6-17 ವರ್ಷ ವಯೋಮಿತಿಯ ಅರ್ಧಕ್ಕಿಂತ ಹೆಚ್ಚು ಮಕ್ಕಳು ಪ್ರತಿಕಾಯ ಹೊಂದಿದ್ದಾರೆ. 6-9 ವಯಸ್ಸಿನವರಲ್ಲಿ ಸೆರೊ ಧನಾತ್ಮಕತೆ 57.2% ಇದ್ದು, 10-17 ವಯಸ್ಸಿನವರಲ್ಲಿ ಈ ಪ್ರಮಾಣ 61.6% ರಷ್ಟಾಗಿದೆ.

ಸಮೀಕ್ಷೆಗೆ ಒಳಪಡಿಸಿದವರಲ್ಲಿ 62.2% ಮಂದಿ ಲಸಿಕೆ ಪಡೆದಿಲ್ಲ. 24.8% ಮಂದಿಗೆ ಒಂದು ಡೋಸ್ ಲಸಿಕೆ ಲಭ್ಯವಾಗಿದ್ದರೆ, 13% ಮಂದಿ ಎರಡೂ ಡೋಸ್ ಪಡೆದಿದ್ದಾರೆ. ಸಮೀಕ್ಷೆಗೆ ಒಳಪಡಿಸಿದಾರೋಗ್ಯ ಕಾರ್ಯಕರ್ತರಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇಕಡ 10.5ರಷ್ಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News