×
Ad

ಅನಾರೋಗ್ಯದಿಂದ ಅಧಿವೇಶನಕ್ಕೆ ಗೈರು: ರಾಜ್ಯಸಭಾಧ್ಯಕ್ಷರಿಗೆ ಪತ್ರ ಕಳುಹಿಸಿದ್ದ ಆಸ್ಕರ್

Update: 2021-07-21 19:35 IST

ಉಡುಪಿ, ಜು.21: ತೀವ್ರ ಅನಾರೋಗ್ಯದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಮುನ್ನ ಅನಾರೋಗ್ಯದ ಕಾರಣ ಈ ಬಾರಿಯ ಸಂಸತ್ ಅಧಿವೇಶದಲ್ಲಿ ಭಾಗವಹಿಸಲು ತಾನು ಅಸಮರ್ಥನಾಗಿರುವುದಾಗಿ ತಿಳಿಸಿ ಆಸ್ಕರ್ ಫೆರ್ನಾಂಡೀಸ್ ಅವರು ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಮುಖೇನ ತಿಳಿಸಿದ್ದರು.

ಸೋಮವಾರವೇ ಆಸ್ಕರ್ ಅವರು ಈ ಪತ್ರ ಬರೆದಿದ್ದಾರೆ. ಆ ಬಳಿಕ ಆಸ್ಪತ್ರೆಗೆ ತೆರಳಿದ ಅವರು ಒಳರೋಗಿಯಾಗಿ ದಾಖಲಾಗಿದ್ದರು ಎಂದು ಆಸ್ಕರ್ ಅವರ ನಿಕಟವರ್ತಿ ಮೂಲಗಳು ತಿಳಿಸಿವೆ.

ಆಸ್ಕರ್ ಫೆರ್ನಾಂಡೀಸ್ ಜು.19ರ ಬೆಳಗ್ಗೆ ಎಂದಿನಂತೆ ವ್ಯಾಯಾಮ ಮಾಡುತಿದ್ದಾಗ, ಅಕಸ್ಮಿಕವಾಗಿ ಕೈಜಾರಿದ್ದು, ಅವರ ತಲೆ ಗೋಡೆಗೆ ಬಡಿದಿತ್ತು. ಆದರೆ ಅದರ ಬಗ್ಗೆ ಹೆಚ್ಚು ಗಮನ ನೀಡದ ಆಸ್ಕರ್ ಎಂದಿನಂತೆ ಡಯಾಲಿಸಿಸ್‌ಗೆಂದು ಆಸ್ಪತ್ರೆಗೆ ತೆರಳಿದ್ದಾಗ ವೈದ್ಯರ ಬಳಿ ತಲೆನೋವೆಂದು ತಿಳಿಸಿದ್ದರು. ಕೂಡಲೇ ಜಾಗ್ರತರಾದ ವೈದ್ಯರು ಸ್ಕ್ಯಾನ್ ಮಾಡಿದಾಗ ಮಿದುಳಿನಲ್ಲಿ ರಕ್ತ ಹೆಪ್ಪು ಗಟ್ಟಿರುವುದು ಕಂಡುಬಂದಿತ್ತು. ಹೀಗಾಗಿ ತಕ್ಷಣ ಐಸಿಯುಗೆ ಸೇರಿಸಿ ಚಿಕಿತ್ಸೆ ಪ್ರಾರಂಭಿಸಲಾಗಿತ್ತು ಎಂದು ನಿಕಟವರ್ತಿಗಳು ವಿವರಿಸಿದ್ದಾರೆ.

ಅಂದು ಉಲ್ಲಸಿತರಾಗಿದ್ದ ಆಸ್ಕರ್, ಮುಂಜಾನೆಯ ವೇಳೆ ಪ್ರಜ್ಞೆ ಕಳೆದು ಕೊಂಡಿದ್ದರು. ನಿನ್ನೆ ಸಂಜೆ ಅವರನ್ನು ಪರೀಕ್ಷಿಸಿದ ಉಡುಪಿಯ ಖ್ಯಾತ ನರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ಎ.ರಾಜಾ, 24 ಗಂಟೆಗಳ ಕಾಲ ಕಾದು ಪರಿಸ್ಥಿತಿಯನ್ನು ಪರಿಶೀಲಿಸಿ ಶಸ್ತ್ರಚಿಕಿತ್ಸೆಯ ಬಗ್ಗೆ ನಿರ್ಧರಿಸಬಹುದು ಎಂದು ತಿಳಿಸಿದ್ದಾರೆ. ಆಸ್ಕರ್ ಅವರ ಸ್ಥಿತಿ ಗಂಭೀರವಾಗಿದ್ದೂ  ಸ್ಥಿರವಾಗಿದೆ ಎಂದು ಮೂಲ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News