ವಿಶಾಲ ಗಾಣಿಗ ಕೊಲೆ ಪ್ರಕರಣ: ಆರು ತಿಂಗಳ ಹಿಂದೆಯೇ ಕೊಲೆಗೆ ಸಂಚು ರೂಪಿಸಿದ್ದ ಗಂಡ !

Update: 2021-07-21 16:24 GMT

ಉಡುಪಿ, ಜು.21: ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಕೋಟೆ ಮಾಬುಕಳದ ಮಿಲನ ರೆಸಿಡೆನ್ಸಿ ಒಂದರಲ್ಲಿ ನಡೆದ ವಿಶಾಲ ಗಾಣಿಗ (35) ಕೊಲೆ ಪ್ರಕರಣವನ್ನು ಬೇಧಿಸಿರುವ ಉಡುಪಿ ಪೊಲೀಸರು ಬುಧವಾರ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಮಾಹಿತಿಗಳನ್ನು ಪತ್ರಕರ್ತರೊಂದಿಗೆ ಹಂಚಿಕೊಂಡರು.

ಪತ್ನಿ ವಿಶಾಲ ಗಾಣಿಗ ಅವರ ಹತ್ಯೆಗಾಗಿ ಕಳೆದ ಆರು ತಿಂಗಳಿನಿಂದ ಸಂಚು ರೂಪಿಸಿ, ಯಾವುದೇ ಸಾಕ್ಷಿ, ಸಾಕ್ಷ ಇಲ್ಲದಂತೆ ಯೋಜನೆಯನ್ನು ಕಾರ್ಯಗತಗೊಳಿಸಿದ ಪತಿ ರಾಮಕೃಷ್ಣ ಗಾಣಿಗ ಇಡೀ ಪ್ರಕರಣದ ರೂವಾರಿಯಾದರೆ, ಆತನಿಂದ ಹತ್ಯೆಗೆ ಸುಪಾರಿ ಪಡೆದ ಇಬ್ಬರು ಆರೋಪಿಗಳಲ್ಲಿ ಒಬ್ಬನಾದ ಉತ್ತರ ಪ್ರದೇಶದ ಗೋರಖಪುರ ನಿವಾಸಿ ಸ್ವಾಮಿನಾಥ ನಿಶಾದ (38) ಎಂಬಾತನನ್ನು ಈಗಾಗಲೇ ಬಂಧಿಸಿದ್ದು, ಗೋರಖಪುರದವನೇ ಆದ ಇನ್ನೊಬ್ಬ ಸುಪಾರಿ ಹಂತಕ ಹಾಗೂ ಇಬ್ಬರನ್ನು ರಾಮಕೃಷ್ಣನಿಗೆ ಪರಿಚಯಿಸಿದ ವ್ಯಕ್ತಿಯ ಬಂಧನ ಇನ್ನಷ್ಟೇ ಆಗಬೇಕಿದೆ. ಇಬ್ಬರನ್ನೂ ಒಂದೆರಡು ದಿನಗಳಲ್ಲಿ ಬಂಧಿಸುವ ವಿಶ್ವಾಸವಿದೆ ಎಂದು ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ತಿಳಿಸಿದರು.

ಉತ್ತರ ಪ್ರದೇಶ ಮೂಲದ ಸುಪಾರಿ ಹಂತಕರ ಮೂಲಕ ಬೀಜೂರು ಚಾರುಕೊಡ್ಲು ನಿವಾಸಿ ರಾಮಕೃಷ್ಣ ಗಾಣಿಗ, ಪತ್ನಿ ವಿಶಾಲ ಗಾಣಿಗರ ಹತ್ಯೆ ನಡೆಸಿದ್ದಾಗಿ ಮಾಹಿತಿ ನೀಡಿದ ವಿಷ್ಣುವರ್ಧನ್, ಗೋರಖಪುರದ ನೇಪಾಳ ಗಡಿ ಸಮೀಪ ಸ್ವಾಮಿನಾಥನನ್ನು ಜು.19ರಂದು ಅಲ್ಲಿನ ಎಸ್ಪಿ ದಿನೇಶ್‌ ಕುಮಾರ್ ಮತ್ತವರ ಸ್ವಾಟ್ ತಂಡದ ಸಹಕಾರದಿಂದ ಅಲ್ಲಿಗೆ ತೆರಳಿದ ಉಡುಪಿ ಪೊಲೀಸ್ ತಂಡ ಬಂಧಿಸಿ ಸೂಕ್ತ ಕಾನೂನು ಪ್ರಕ್ರಿಯೆಯ ಬಳಿಕ ಇಂದು ಬೆಳಗ್ಗೆ ಉಡುಪಿಗೆ ಕರೆತಂದಿದೆ. ಆತನಿಂದ ಎಲ್ಲಾ ಮಾಹಿತಿಗಳನ್ನು ಇನ್ನಷ್ಟೇ ಕಲೆ ಹಾಕಬೇಕಿದೆ ಎಂದು ವಿವರಿಸಿದರು.

ಜು.12ರಂದು ವಿಶಾಲ ಗಾಣಿಗ ಅವರನ್ನು ಅವರ ಫ್ಲ್ಯಾಟಿನಲ್ಲಿ ವಯರಿನಿಂದ ಕತ್ತು ಬಿಗಿದು ಸಾಯಿಸಲಾಗಿತ್ತು. ಬಳಿಕ ತನಿಖೆಯ ದಿಕ್ಕು ತಪ್ಪಿಸಲು ಆಕೆಯ ಮೈಮೇಲಿದ್ದ ಲಕ್ಷಾಂತರ ರೂ. ಮೌಲ್ಯದ ಆಭರಣಗಳನ್ನು ಅಪಹರಿಸಲಾಗಿತ್ತು. ಇವೆಲ್ಲವನ್ನೂ ದುಬೈನಲ್ಲೇ ಕುಳಿತು ರಾಮಕೃಷ್ಣ ಗಾಣಿಗ ಮಾಡಿಸಿದ್ದು, ಇದಕ್ಕಾಗಿ ಆರು ತಿಂಗಳಿನಿಂದ ಸ್ವತಹ ಹೆಂಡತಿಗೆ ಅರಿವಿಗೆ ಬಾರದಂತೆ ಯೋಜನೆಯನ್ನು ರೂಪಿಸಿದ್ದ. ಸುಪಾರಿಯಾಗಿ ಈಗಾಗಲೇ ಎರಡು ಲಕ್ಷ ರೂಪಾಯಿಗಿಂತಲೂ ಅಧಿಕ ಮೊತ್ತವನ್ನು ಹಂತಕರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದ ಎಂದು ಎಸ್ಪಿ ತಿಳಿಸಿದರು.

ರಾಮಕೃಷ್ಣ ಕಳೆದ ಆರು ತಿಂಗಳಿನಿಂದ ಕೊಲೆಯ ಪ್ರತಿಯೊಂದು ಹಂತವನ್ನು ಕರಾರುವಕ್ಕಾಗಿ ಯೋಜಿಸಿದ್ದ. ಮೊದಲು ಪತ್ನಿಯೊಂದಿಗೆ ಊರಿಗೆ ಬಂದು ಕುಮ್ರಗೋಡಿನ ತನ್ನ ಪ್ಲಾಟ್‌ಗೆ ಸುಪಾರಿ ಹಂತಕರನ್ನು ಕರೆಸಿ ಇವರು ತನ್ನ ಸ್ನೇಹಿತರೆಂದು ಪರಿಚಯಿಸಿದ್ದ. ಇದಾದ ಬಳಿಕ ಜು.12ರಂದು ಸುಪಾರಿ ಹಂತಕರ ಮೂಲಕ ಯೋಜನೆಯನ್ನು ಕಾರ್ಯಗೊಳಿಸಿದ್ದಾನೆ. ವಿಶಾಲ ಗಾಣಿಗರ ಪತಿ ರಾಮಕೃಷ್ಣನನ್ನು ಈಗಾಗಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದೇವೆ. ವಿಚಾರಣೆಗಾಗಿ ಆತನನ್ನು ಜುಲೈ 23ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದೇವೆ ಎಂದರು.

ಬಹುಮಾನ ಘೋಷಣೆ: ಯಾವುದೇ ಸಾಕ್ಷ, ಸಾಕ್ಷಿ ಇಲ್ಲದ ಈ ಪ್ರಕರಣವನ್ನು ಅತೀ ಕಡಿಮೆ ಅವಧಿಯಲ್ಲಿ, ಅತೀ ಜಾಣ್ಮೆಯಿಂದ, ಸಿಕ್ಕಿದ ಕೆಲ ತಾಂತ್ರಿಕ ಮಾಹಿತಿಗಳನ್ನು ಸಮರ್ಥವಾಗಿ ವಿಶ್ಲೇಷಿಸಿ ಪ್ರಕರಣವನ್ನು ಭೇದಿಸಿದ್ದಕ್ಕಾಗಿ ತನಿಖೆ ನಡೆಸಿದ ಪೊಲೀಸರ ತಂಡಕ್ಕೆ ರಾಜ್ಯ ಡಿಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ಅವರು 50,000 ರೂ.ಗಳ ಬಹುಮಾನ ಘೋಷಣೆ ಮಾಡಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.

ಕೊಲೆಗೆ ಕಾರಣ ಅಸ್ಪಷ್ಟ

ಕೊಲೆಗೆ ಗಂಡ ಹೆಂಡತಿಯರ ನಡುವಿನ ವೈಮನಸ್ಸು, ಕೌಟುಂಬಿಕ ಕಲಹವೇ ಕಾರಣ ಅಂತ ರಾಮಕೃಷ್ಣ ಗಾಣಿಗ ಇದುವರೆಗೆ ಪೊಲೀಸ್ ತನಿಖೆ ವೇಳೆ ತಿಳಿಸಿದ್ದಾನೆ. ಆದರೆ ಇಡೀ ಪ್ರಕರಣವನ್ನು ಅವಲೋಕಿಸಿದರೆ ಇದು ಸಂಶಯ ಹುಟ್ಟಿಸುತ್ತದೆ ಎಂದು ಎಸ್ಪಿ ಹೇಳಿದರು.

ಸುಪಾರಿ ನೀಡಿದ ರಾಮಕೃಷ್ಣ ಗಾಣಿಗ ಹಾಗೂ ಹಂತಕ ಸ್ವಾಮಿನಾಥ ಈಗಾಗಲೇ ಸೆರೆ ಸಿಕ್ಕಿರುವುದರಿಂದ ಇನ್ನಷ್ಟು ತನಿಖೆ ವೇಳೆ ನಿಜವಾದ ಕಾರಣ ಹೊರಬರುವ ವಿಶ್ವಾಸ ಹೊಂದಿರುವುದಾಗಿ ಪೋಲಿಸರು ತಿಳಿಸಿದ್ದಾರೆ.

ಆರ್ಥಿಕ ವ್ಯವಹಾರ, ಆಕ್ರಮ ಸಂಬಂಧ ಇದರಲ್ಲಿ ತಳುಕು ಹಾಕಿಕೊಂಡಿರುವ ಮಾಹಿತಿ ಇದ್ದು, ಕೂಲಂಕಷ ತನಿಖೆಯಿಂದಷ್ಟೇ ಇದು ಹೊರ ಬರಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಗಂಡ ಹೆಂಡತಿ ಮಧ್ಯೆ ಆಗಾಗ ಜಗಳ ನಡೆಯುತಿದ್ದು, ಆಸ್ತಿ ವಿಚಾರದಲ್ಲೂ ಗಲಾಟೆ ಆದ ಕಾರಣ, ಪತ್ನಿ ಕೊಲೆಗೆ ಸುಪಾರಿ ನೀಡಿದ ಎನ್ನುವ ಮಾಹಿತಿ ಇದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ತನಿಖೆ ಪೂರ್ಣಗೊಂಡ ಬಳಿಕ ಇನಷ್ಟು ಸ್ವಷ್ಟ ಚಿತ್ರಣ ಸಿಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News