ಇಂದಿನಿಂದ ಜಂತರ್ ಮಂತರ್‌ನಲ್ಲಿ ರೈತರ ಧರಣಿ

Update: 2021-07-22 03:42 GMT

ಹೊಸದಿಲ್ಲಿ : ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಕಳೆದ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ಗುರುವಾರದಿಂದ ಸಂಸತ್ ಭವನ ಸಮೀಪದ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಪ್ರಕಟಿಸಿದೆ.

ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಗರಿಷ್ಠ 200 ಮಂದಿ ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದು ಮತ್ತು ಆಗಸ್ಟ್ 9ರವರೆಗೆ ಪ್ರತಿಭಟನೆ ನಡೆಸಲು ಅವಕಾಶವಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವಕಾಶ ನೀಡಿದ್ದಕ್ಕೆ ಅನುಸಾರವಾಗಿ ಪ್ರತಿದಿನ 200 ಮಂದಿ ರೈತರು ಬಸ್ಸಿನಲ್ಲಿ ಜಂತರ್ ಮಂತರ್‌ಗೆ ತೆರಳಿ ಧರಣಿ ನಡೆಸುವರು ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಜೇಶ್ ಟಿಕಾಯತ್ ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಕೋವಿಡ್-19 ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾವುದು ಹಾಗೂ ಪ್ರತಿಭಟನೆ ಶಾಂತಿಯುತವಾಗಿರುತ್ತದೆ ಎಂದು ರೈತರು ಅಫಿಡವಿಟ್ ನೀಡಬೇಕಾಗುತ್ತದೆ. ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಧರಣಿ ಸ್ಥಳಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

ಜಂತರ್ ಮಂತರ್ ಧರಣಿಗೆ ರೈತರು ಸಜ್ಜಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸಿಂಘು ಗಡಿಯ ಬಳಿಯೂ ಭದ್ರತಾ ವ್ಯವಸ್ಥೆ ಬಿಗಿಪಡಿಸಿರುವ ಚಿತ್ರಗಳನ್ನು ಎಎನ್‌ಐ ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News