ದೇಶದ ವಿವಿಧೆಡೆಗಳಲ್ಲಿ 'ದೈನಿಕ್ ಭಾಸ್ಕರ್' ಕಚೇರಿಗಳ ಮೇಲೆ ಐಟಿ ದಾಳಿ

Update: 2021-07-22 05:44 GMT

ಹೊಸದಿಲ್ಲಿ: ದೇಶದ ಅತ್ಯಂತ ದೊಡ್ಡ ಪತ್ರಿಕಾ ಸಮೂಹಗಳಲ್ಲೊಂದಾಗಿರುವ 'ದೈನಿಕ್ ಭಾಸ್ಕರ್'ನ ಹಲವಾರು ಕಚೇರಿಗಳ ಮೇಲೆ ವಿವಿಧೆಡೆಗಳಲ್ಲಿ ಇಂದು ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಸ್ಥೆಯ ವಿರುದ್ಧ ತೆರಿಗೆ ವಂಚನೆ ಆರೋಪ ಹೊರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.

ದಿಲ್ಲಿ, ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ 'ದೈನಿಕ್ ಭಾಸ್ಕರ್' ಕಚೇರಿಗಳ ಮೇಲೆ ದಾಳಿ ನಡೆದಿದೆ. ಸಂಸ್ಥೆಯ ಪ್ರಮುಖರ ಮನೆ ಹಾಗೂ ಕಚೇರಿಗಳ ಮೇಲೆಯೂ ದಾಳಿ ನಡೆದಿದೆ. ಜೈಪುರ್, ಅಹ್ಮದಾಬಾದ್, ಭೋಪಾಲ್ ಮತ್ತು ಇಂದೋರ್ ನಲ್ಲಿ ದಾಳಿಗಳು ಮುಂದುವರಿದಿವೆ.

ಎಪ್ರಿಲ್-ಮೇ ತಿಂಗಳಲ್ಲಿ ದೇಶದಲ್ಲಿ ಕೋವಿಡ್ ಎರಡನೇ ಅಲೆ ಉಂಟು ಮಾಡಿದ ಅಪಾರ ಸಾವುನೋವುಗಳ ಕುರಿತಂತೆ ವ್ಯಾಪಕ ಹಾಗೂ ಕಣ್ಣಿಗೆ ಕಟ್ಟುವಂತಹ ವರದಿಗಳನ್ನು ‘ದೈನಿಕ್ ಭಾಸ್ಕರ್’ ಪ್ರಕಟಿಸಿತ್ತು.

ಸೋಂಕು ವ್ಯಾಪಕವಾಗಿ ಹರಡಿದಂತೆ ಆಕ್ಸಿಜನ್, ಬೆಡ್ ಹಾಗೂ ಲಸಿಕೆಗಳ ಕೊರತೆ ಕುರಿತಂತೆ ‘ದೈನಿಕ್ ಭಾಸ್ಕರ್’ ಹಲವಾರು ಟೀಕಾತ್ಮಕ ವರದಿಗಳನ್ನೂ ಪ್ರಕಟಿಸಿತ್ತು. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಗಂಗಾ ನದಿಯಲ್ಲಿ ತೇಲಿ ಬಂದ ಹಲವು ಕೋವಿಡ್ ಸೋಂಕಿತರ ಕಳೇಬರಗಳ ಕುರಿತಂತೆಯೂ ‘ದೈನಿಕ್ ಭಾಸ್ಕರ್’ ವರದಿ ಮಾಡಿತ್ತು.

ಭಾರತದಲ್ಲಿನ ಕೋವಿಡ್ ಸಾವುಗಳ ಕುರಿತು ದೈನಿಕ್ ಭಾಸ್ಕರ್ ಸಂಪಾದಕ ಓಂ ಗೌರ್ ಬರೆದ “ದಿ ಗ್ಯಾಂಜೆಸ್ ಈಸ್ ರಿಟರ್ನಿಂಗ್ ದಿ ಡೆಡ್, ಇಟ್ ಡಸ್ ನಾಟ್ ಲೈ'' ಎಂಬ ಶೀರ್ಷಿಕೆಯ ಲೇಖನವನ್ನು ಒಂದು ತಿಂಗಳ ಹಿಂದೆ ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿತ್ತು. ಭಾರತದ ಅತ್ಯಂತ ಪವಿತ್ರ ನದಿಯು “ಮೋದಿ ಆಡಳಿತದ ವೈಫಲ್ಯಗಳು ಹಾಗೂ ವಂಚನೆಗಳನ್ನು ಪ್ರದರ್ಶಿಸಿತು,'' ಎಂದು ಲೇಖನದಲ್ಲಿ ಅವರು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News