ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಗ್ಗೂಡಬೇಕು: ಮಮತಾ ಬ್ಯಾನರ್ಜಿ

Update: 2021-07-22 05:44 GMT

ಕೊಲ್ಕತ್ತಾ/ ಹೊಸದಿಲ್ಲಿ: "ನಮ್ಮ ಜನಕ್ಕಾಗಿ, ನಮ್ಮ ದೇಶಕ್ಕಾಗಿ ನಾವು ಒಗ್ಗೂಡಬೇಕು. ಇಲ್ಲದಿದ್ದರೆ ಜನ ನಮ್ಮನ್ನು ಕ್ಷಮಿಸಲಾರರು" ಎಂದು ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಜುಲೈ 21ರ ಹುತಾತ್ಮರ ದಿನ ಸಮಾರಂಭದಲ್ಲಿ ಮಾತನಾಡಿದ ಅವರು, 2024ರ ಸಾರ್ವತ್ರಿಕ ಚುನಾವಣೆಗೆ ಬಿಜೆಪಿ ವಿರುದ್ಧ ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿ ಸಂಯುಕ್ತ ರಂಗ ರಚಿಸುವ ಅನಿವಾರ್ಯತೆಯನ್ನು ಒತ್ತಿ ಹೇಳಿದರು.

1993ರ ಜುಲೈ 21ರಂದು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಮೇಲೆ ಪೊಲೀಸರು ಗುಂಡು ಹಾರಿಸಿದಾಗ 13 ಮಂದಿ ಕಾರ್ಯಕರ್ತರು ಮೃತಪಟ್ಟಿದ್ದರು. 1998ರಲ್ಲಿ ಟಿಎಂಸಿ ಉದಯವಾದ ಬಳಿಕ ಪ್ರತಿ ವರ್ಷದ ಜುಲೈ 21ನ್ನು ಬಂಗಾಳದಲ್ಲಿ ಶಾಹೀದ್ ದಿವಸ್ ಆಗಿ ಆಚರಿಸಲಾಗುತ್ತಿದೆ.

"ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಸ್ವ ಹಿತಾಸಕ್ತಿಯನ್ನು ಬದಿಗಿಡಿ; ಜತೆಯಾಗಿ ಕೆಲಸ ಮಾಡೋಣ; ’ಗೋಲಿ ಮತ್ತು ಗಾಲಿ ಕಾ ಸರ್ಕಾರ್’ ವಿರುದ್ಧ ಹೋರಾಡಲು ರಂಗ ಕಟ್ಟೋಣ. ಒಂದು ದಿನವನ್ನೂ ವ್ಯರ್ಥ ಮಾಡಬೇಡಿ" ಎಂದು ಕರೆ ನೀಡಿದರು.

"2024ರಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ದೇಶದ ಪ್ರತಿ ರಾಜ್ಯಗಳಲ್ಲಿ ಆಟ ಮುಂದುವರಿಯಬೇಕು" ಎಂದು ಅಭಿಪ್ರಾಯಪಟ್ಟರು. "ಬುರಾ ನಾ ನಮೋ, ಮೋದೀಜಿ. ಮೊಹಬ್ಬತ್ ಕಾಮ್ ಕಿ ಬಾತ್ ಸೇ ಹೋತಾ ಹೈ, ಮನ್ ಕಿ ಬಾತ್ ಸೇ ನಹಿ (ಮೋದಿಜಿ ತಲೆ ಕೆಡಿಸಿಕೊಳ್ಳಬೇಡಿ. ಪ್ರೀತಿಯ ಪುರಾವೆ ಕೆಲಸವೇ ಹೊರತು ಮಾತಲ್ಲ) ಎಂದು ಪ್ರಧಾನಿಯವರನ್ನು ಚುಚ್ಚಿದರು.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ ಬಳಿಕ ರಾಜ್ಯದಾಚೆಗಿನ ಶ್ರೋತೃಗಳನ್ನು ಉದ್ದೇಶಿಸಿ ಮೊದಲ ಬಾರಿಗೆ ಮಾತನಾಡಿದ ಅವರ ಭಾಷಣವನ್ನು ದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಪ್ರಸಾರ ಕಾರ್ಯಕ್ರಮದಲ್ಲಿ ಹಲವು ಮಂದಿ ವಿರೋಧ ಪಕ್ಷಗಳ ಮುಖಂಡರು ಆಲಿಸಿದರು. ಮುಂದಿನ ವಾರ ದೆಹಲಿಗೆ ಭೇಟಿ ನೀಡುವ ವೇಳೆ ವಿರೋಧ ಪಕ್ಷಗಳ ಮುಖಂಡರನ್ನು ಭೇಟಿ ಮಾಡುವ ಕಾರ್ಯಕ್ರಮವನ್ನೂ ಇದೇ ವೇಳೆ ಮಮತಾ ನಿಗದಿಪಡಿಸಿದರು.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಪುತ್ರಿ ಸುಪ್ರಿಯಾ ಸುಳೆ, ಹಿರಿಯ ಕಾಂಗ್ರೆಸ್ ಮುಖಂಡರಾದ ಪಿ.ಚಿದಂಬರಂ, ದಿಗ್ವಿಜಯ ಸಿಂಗ್, ಸಮಾಜವಾದಿ ಸಂಸದರಾದ ಜಯಾ ಬಚ್ಚನ್ ಮತ್ತು ರಾಮಗೋಪಾಲ್ ವರ್ಮಾ, ಟಿಎಂಸಿ ಸಂಸದ ತಿರುಚಿ ಶಿವ, ಎಎಪಿ ಸಂಸದ ಸಂಜಯ್ ಸಿಂಗ್, ಆರ್‌ಜೆಡಿಯ ಮನೋಜ್ ಝಾ, ಟಿಆರ್‌ಎಸ್‌ನ ಕೇಶವ ರಾವ್, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ, ಶಿರೋಮಣಿ ಅಕಾಲಿದಳ ಬಲ್ವೀಂದರ್ ಸಿಂಗ್ ಭುಂದಾರ್ ಮತ್ತು ಟಿಎಂಸಿ ಸಂಸದರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News